ಬೆಂಗಳೂರು, ಡಿ. 5: ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸುವದಂತೂ ಖಚಿತವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಮುಕ್ತ ಅಭಿಪ್ರಾಯವನ್ನು ಕೇಂದ್ರವು ಹಲವು ಬಾರಿ ಕೋರಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕುರಿತಾಗಿ ಕೇಂದ್ರ ಪರಿಸರ ಅರಣ್ಯ ಹವಾಮಾನ ಇಲಾಖೆಯ ಸಚಿವರಾದ ಪ್ರಕಾಶ್ ಜಾವ್ಡೇಕರ್ ಅವರಿಗೆ ಬರೆದಿರುವ ಪ್ರತಿಕ್ರಿ ಯಾತ್ಮಕ ಪತ್ರದಲ್ಲಿ ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಗೊಳಿಸಿದ್ದಾರೆ.

ಮುಖ್ಯಮಂತ್ರಿಯವರು ತಮ್ಮ ಪತ್ರದಲ್ಲಿ ಈ ಹಿಂದೆಯೂ ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳುಹಿಸಿದ್ದ ಪತ್ರಗಳ ಬಗ್ಗೆ ಉಲ್ಲೇಖಿಸಿದ್ದಾರೆ. ತಾ.5.5.2014, 27.2.2016, 22.4.2017 ಹಾಗೂ 29.12.2018ರಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಸ್ತೂರಿರಂಗನ್ ವರದಿ ಜಾರಿಯ ಕುರಿತು ತನ್ನ ನಿಲುವನ್ನು ಖಚಿತಪಡಿಸಿದೆ. ಕೇಂದ್ರವು ಕರಡು ಸೂಚನೆಗಳನ್ನೊಳಗೊಂಡ ವರದಿಯ ಅಂಶಗಳ ಕುರಿತಾದ ಮಾಹಿತಿಯನ್ನು ತಾ. 10.3.2014, ತಾ.4.9.2015, 27.2.2017 ಹಾಗೂ 3.10.2018 ರಂದು ಕಳುಹಿಸಿತ್ತು.

ಇದೀಗ ಕೇಂದ್ರವು ಜಾರಿ ಗೊಳಿಸಲು ಉದ್ದೇಶಿಸಿರುವ ವರದಿಯ ಕರಡು ಪ್ರತಿಯಲ್ಲಿರುವ ಅಂಶಗಳು ಇನ್ನೂ ನಿಖರವಾಗಿಲ್ಲ. ಆದುದರಿಂದ ತಕ್ಷಣವೇ ಯಥಾವತ್ತಾಗಿ ಈ ವರದಿಯನ್ನು ಜಾರಿಗೊಳಿಸಬಾರದು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಕಳಕಳಿಯನ್ನು ಗಮನಿಸಿ ಮುಂದೆ ಈ ಬಗ್ಗೆ ದೀರ್ಘ ಚರ್ಚೆ ಬಳಿಕವಷ್ಟೇ ಹೆಜ್ಜೆ ಇರಿಸುವದು ಸೂಕ್ತ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಅವರ ಪತ್ರದ ಮುಖ್ಯಾಂಶ ದನ್ವಯ ಪ್ರಸಕ್ತ ಕರ್ನಾಟಕದಲ್ಲಿ 20,668 ಚ.ಕಿ.ಮೀ.ಗಳಷ್ಟು ಪಶ್ಚಿಮಘಟ್ಟ ಪ್ರದೇಶವಿದೆ. ಈ ಪೈಕಿ 16,632 ಚ.ಕಿ.ಮೀ.ಗಳಷ್ಟು ಪ್ರದೇಶದಲ್ಲಿ ಒಂದಲ್ಲ ಒಂದು ರೀತಿ ಸೂಕ್ಷ್ಮ ಪರಿಸರ ವಲಯದ ನಿರ್ಬಂಧಗಳಿದ್ದು, ಅರಣ್ಯ ಸಂರಕ್ಷಿತ ಪ್ರದೇಶವೆನಿಸಿದೆ. ಮತ್ತೆ ಈ ಪ್ರದೇಶದಲ್ಲಿ ಹೆಚ್ಚಿನ ನಿರ್ಬಂಧ ಹೇರುವದು ವಿರೋಧಾಭಾಸಕರ ವಾಗಬಹುದು. ಅಲ್ಲದೆ ಕರಡು ಪ್ರತಿಯಲ್ಲಿ ಇಂತಹ ಅರಣ್ಯ ಸಂರಕ್ಷಣೆಗೆ ರಾಜ್ಯ ಸರ್ಕಾರಕ್ಕೆ ಯಾವ ರೀತಿಯ ಆರ್ಥಿಕ ಪ್ರೋತ್ಸಾಹ ದೊರಕುತ್ತದೆ ಎನ್ನುವ ಬಗ್ಗೆಯೂ ಸ್ಪಷ್ಟ ಮಾಹಿತಿಯಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿತ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ ದೀರ್ಘ ಚರ್ಚೆ ಬಳಿಕ ನಿರ್ಧಾರ ಕೈಗೊಳ್ಳುವದು ಉತ್ತಮ ಎಂದು ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ಸಲಹೆಯಿತ್ತಿದ್ದಾರೆ.

ಕಾಫಿಗೆ ಧಕ್ಕೆಯಾಗಬಾರದು

ಈ ಕುರಿತಾಗಿ ಕೊಡಗು ವನ್ಯಜೀವಿ ಸಂಘದ ಕಾರ್ಯದರ್ಶಿ ತರುಣ್ ಕಾರ್ಯಪ್ಪ ಅವರನ್ನು ‘ಶಕ್ತಿ’ ಸಂಪರ್ಕಿಸಿ ಅಭಿಪ್ರಾಯ ಬಯಸಿದಾಗ ಕಸ್ತೂರಿರಂಗನ್ ವರದಿ ಕುರಿತು ಕೊಡಗು

(ಮೊದಲ ಪುಟದಿಂದ) ವನ್ಯಜೀವಿ ಸಂಘವು ಈ ಹಿಂದೆಯೇ ಸರ್ಕಾರಕ್ಕೆ ತನ್ನ ಲಿಖಿತ ಅಭಿಪ್ರಾಯವನ್ನು ಕಳುಹಿಸಿದೆ. ಮುಖ್ಯವಾಗಿ ಪಶ್ಚಿಮಘಟ್ಟ ಪ್ರದೇಶದ ಕೊಡಗಿನಲ್ಲಿ ಕಾಫಿಯೇ ಜನಜೀವನದ ಮುಖ್ಯ ಜೀವಾಳವಾಗಿದೆ. ಈ ಹಿನ್ನೆಲೆಯಲ್ಲಿ ಕಾಫಿ ಪಲ್ಪಿಂಗ್ ಇರಬಹುದು, ಕಾಫಿ ಸಂಸ್ಕರಣೆ ಇರಬಹುದು ಇಂತಹ ಘಟಕಗಳಿಗೆ ವರದಿ ಜಾರಿಯಿಂದ ಯಾವದೇ ಧಕ್ಕೆ ಉಂಟಾಗಬಾರದು ಮಾತ್ರವಲ್ಲ, ಸಾವಯವ ಗೊಬ್ಬರವನ್ನು ಮಾತ್ರ ತೋಟಗಳಿಗೆ ಬಳಸಬೇಕು. ರಾಸಾಯನಿಕ ಗೊಬ್ಬರ ಬಳಸಬಾರದು ಎನ್ನುವ ನಿರ್ಬಂಧಗಳೇನಾದರೂ ಬಂದರೆ ಕಾಫಿ ಉದ್ಯಮ ವಿನಾಶಗೊಳ್ಳುತ್ತದೆ. ಏಕೆಂದರೆ ಕಾಫಿಗೆ ರಾಸಾಯನಿಕ ಗೊಬ್ಬರ ಬಳಕೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ ವರದಿ ಜಾರಿ ಸಂದರ್ಭ ಸರ್ಕಾರ ಗಂಭೀರವಾದ ಗಮನ ಹರಿಸಬೇಕಾಗಿದೆ. ರೆಸಾರ್ಟ್ ಉದ್ಯಮದ ವಿಚಾರ ಬಂದಾಗ ಕಾನೂನಾತ್ಮಕವಾಗಿ ಮರ ಕಡಿಯುವದಾಗಲೀ, ಉದ್ಯಮವನ್ನು ಸ್ಥಾಪಿಸುವದಾಗಲಿ ಮಾಡಬಹುದು. ಆದರೆ ಕಾನೂನು ನಿರ್ಬಂಧ ಮೀರಿ ಅನಧಿಕೃತವಾಗಿ ಭೂಪರಿವರ್ತನೆ, ಮರ ಕಡಿಯುವಿಕೆ ಮಾಡಬಾರದು ಅದೇ ರೀತಿ ಕಾನೂನಿನ ಎಲ್ಲೆ ಮೀರಿ ಅನಧಿಕೃತ ಮರಗಳನ್ನು ಕಡಿಯಬಾರದು. ಆದರೆ ಕಾನೂನಾತ್ಮಕವಾಗಿ ಮರ ಕಡಿಯಲು ಅಡ್ಡಿಪಡಿಸ ಬಾರದು ಯಾವದೇ ಸಂದರ್ಭ ಕೃಷಿ ಬೆಳೆಗಳಿಗೆ ತೊಂದರೆಯಾಗದಂತಹ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಹುದು ಎನ್ನುವದು ಸಂಘದ ನಿಲುವಾಗಿದೆ ಎಂದು ತರುಣ್ ಕಾರ್ಯಪ್ಪ ವಿವರಿಸಿದರು.

ಬದುಕಿಗೆ ಪೆಟ್ಟು ಬೀಳದಿರಲಿ

ಸೇವ್ ಕೊಡಗು ಸಂಸ್ಥೆಯ ಪ್ರಮುಖರಾದ ಬಿದ್ದಾಟಂಡ ಟಿ. ದಿನೇಶ್ ಅವರನ್ನು ‘ಶಕ್ತಿ’ ಸಂಪರ್ಕಿಸಿ ಅಭಿಪ್ರಾಯ ಬಯಸಿದಾಗ ದೇಶದಲ್ಲಿ ಅಧಿಕಗೊಳ್ಳುತ್ತಿರುವ ಜನಸಂಖ್ಯೆಗೆ ಪೂರಕವಾದಂತಹ ಭೂಮಿಯ ಪ್ರಮಾಣ ಅಲಭ್ಯವಾಗುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಪರಿಸರ ಉಳಿಸುವದು ಎಷ್ಟು ಮುಖ್ಯವೊ ಅಲ್ಲಿನ ಜನರ ಬದುಕಿಗೆ ಪೆಟ್ಟು ಬೀಳದಂತೆ ಆದ್ಯತೆ ನೀಡುವದೂ ಅಷ್ಟೆ ಮುಖ್ಯವಾಗಿದೆ. ಸುಂದರ್‍ಲಾಲ್ ಬಹುಗುಣ ಅವರಂತಹ ನೈಜ ಪರಿಸರವಾದಿಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಅಂತವರ ಸಲಹೆಗಳಿಗೆ ಖಂಡಿತ ಮಾನ್ಯತೆ ನೀಡಬೇಕು. ಆದರೆ ಅನುಕೂಲ ಸಿಂಧು ಪರಿಸರವಾದಿಗಳೆನಿಸಿದವರು ವಿದೇಶಿ ಹಣ ಪಡೆಯಲು ಪರಿಸರ ಉಳಿಸುವ ಕಪಟ ನಾಟಕವಾಡುತ್ತಾ ಮರುಳು ಮಾಡುತ್ತಿದ್ದಾರೆ. ಅಂತವರ ಬಗ್ಗೆ ಎಚ್ಚರಿಕೆ ವಹಿಸುವ ಮೂಲಕ ರಾಜಕೀಯ ಪ್ರತಿನಿಧಿಗಳು ಕೂಡ ಜನರ ಸಮಸ್ಯೆ ಬಗ್ಗೆ ಕಾಳಜಿ ವಹಿಸುವ ಮೂಲಕ ಯಾವದೇ ವರದಿಗಳನ್ನು ಜಾರಿಗೊಳಿಸುವಾಗ ಮುನ್ನೆಚ್ಚರಿಕೆ ವಹಿಸಲಿ ಎಂದು ದಿನೇಶ್ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.