ಗೋಣಿಕೊಪ್ಪಲು, ಡಿ. 5: ಅಶ್ವಿನಿ ಕ್ರೀಡಾ ಪ್ರತಿಷ್ಠಾನ ಮತ್ತು ಕಾಲ್ಸ್ ಶಾಲಾ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕೊಡಗು ಜಿಲ್ಲಾ ಅಂತರ ಶಾಲಾ ಅಥ್ಲೆಟಿಕ್ಸ್ ತಂಡಗಳು, ಆಹ್ವಾನಿತ ಮಂಗಳೂರು ಮತ್ತು ಮೈಸೂರು ಜಿಲ್ಲಾ ತಂಡಗಳ ನಡುವೆ ತಾ.2 ಮತ್ತು ತಾ. 3 ರಂದು ನಡೆದ ಪಂದ್ಯಾವಳಿ ಯಲ್ಲಿ ಪಾಲಿಬೆಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಎಸ್.ದವಳ್ 12 ವರ್ಷ ವಯೋಮಿತಿಯ 100, 200,800 ಮೀ.ಓಟದ ಸ್ಪರ್ಧೆಯಲ್ಲಿ ಹಾಗೂ ಲಾಂಗ್ ಜಂಪ್ನಲ್ಲಿ ಅಭೂತಪೂರ್ವ ಸಾಧನೆ ಮೆರೆದು ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದು ಕೊಂಡಿದ್ದಾರೆ. ದವಳ್ನ ಉತ್ತಮ ಸಾಧನೆಯನ್ನು ಗುರುತಿಸಿದ ಅಶ್ವಿನಿ ನಾಚಪ್ಪ ಹಾಗೂ ಕಾಲ್ಸ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟೃಸ್ಟಿ ದತ್ತಾ ಕರುಂಬಯ್ಯ ಪ್ರಶಂಸೆ ವ್ಯಕ್ತಪಡಿಸಿದ್ದು, ಮುಂದೆ ಆತನನ್ನು ಉತ್ತಮ ಅಥ್ಲೆಟ್ ಆಗಿ ರೂಪಿಸಲು ಎಲ್ಲ ಪೂರಕ ಸಹಕಾರ ನೀಡಲಾಗುವದು ಎಂದು ತಿಳಿಸಿದ್ದಾರೆ. ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಎಂ.ಬಿ. ಗಣಪತಿ ಅವರು ದ್ವಿತೀಯ ವರ್ಷದ ಅಥ್ಲೆಟಿಕ್ ಚಾಂಪಿಯನ್ ಶಿಪ್ ಅನ್ನು ಉದ್ಘಾಟಿಸಿ ಶುಭಕೋರಿದರು.
ಪ್ರಥಮ ವರ್ಷದ ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾದ ಕ್ರೀಡಾಕೂಟದಲ್ಲಿ ಸುಮಾರು 21 ಶಾಲೆಯ 247 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಬಾರಿ ಮಂಗಳೂರು, ಮೈಸೂರು ಹಾಗೂ ಕೊಡಗು ಜಿಲ್ಲೆ ಒಳಗೊಂಡಂತೆ ಸುಮಾರು 41 ಶಾಲೆಯ ಸುಮಾರು 650ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದು ಸುಮಾರು ರೂ.8ಲಕ್ಷ ವೆಚ್ಚದಲ್ಲಿ 12,14,16 ಮತ್ತು 18 ರ ವಯೋಮಿತಿ ಶಾಲಾ ಬಾಲಕ, ಬಾಲಕಿಯರಿಗಾಗಿ ಎಎಸ್ಎ¥sóï ಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ಶಿಪ್ ಆಯೋಜಿಸಲಾಗಿದೆ ಎಂದು ದತ್ತಾ ಕರುಂಬಯ್ಯ ಮಾಹಿತಿ ನೀಡಿದರು.
ಕ್ರೀಡಾಕೂಟದಲ್ಲಿ 100, 200, 400, 800 ಮತ್ತು 1500 ಮೀ. ಓಟದ ಸ್ಪರ್ಧೆ, ಶಾಟ್ಪುಟ್, ಡಿಸ್ಕಸ್ ಥ್ರೋ, ಎತ್ತರ ಜಿಗಿತ, ಉದ್ದ ಜಿಗಿತ, 110 ಮೀ.ಹರ್ಡಲ್ಸ್ ಹಾಗೂ 4x 400 ಮೀ.ರಿಲೇ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಲ್ಲ ನಾಲ್ಕು ವಯೋಮಿತಿಯ ವಿಭಾಗದಲ್ಲಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆಯನ್ನು ಶಿಸ್ತುಬದ್ಧವಾಗಿ ಏರ್ಪಡಿಸಲಾಗಿತ್ತು.
ಒಟ್ಟು ಎಂಟು ವಿಭಾಗದಲ್ಲಿ ಸರ್ವಾಂಗೀಣ ಸಾಧನೆ ಮಾಡಿದ ಬಾಲಕ ಬಾಲಕಿಯರ ವಿವರ ಇಂತಿದೆ. 12 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ಶಿಪ್ ಅನ್ನು ಪಾಲಿಬೆಟ್ಟ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್.ದವಳ್, ಬಾಲಕಿಯರ ವಿಭಾಗ: ಮಡಿಕೇರಿ ಭಾರತೀಯ ವಿದ್ಯಾಭವನ ಕೇಂದ್ರೀಯ ವಿದ್ಯಾಲಯದ ಎ.ಎಸ್. ಗಗನ, 14 ವರ್ಷದ ಬಾಲಕರ ವಿಭಾಗ: ಕಾಲ್ಸ್ನ ಕರಣ್ ಅಯ್ಯಪ್ಪ, ಬಾಲಕಿಯರ ವಿಭಾಗ: ಮಂಗಳೂರು ಲೂಡ್ರ್ಸ್ ಸೆಂಟ್ರಲ್ ಶಾಲೆಯ ಶ್ರೇಯಾ ಅರ್ಬಿ, 16 ವರ್ಷ ವಯೋಮಿತಿ ಬಾಲಕರ ವಿಭಾಗದಲ್ಲಿ ಕಾಲ್ಸ್ನ ಶ್ರೀನಿಧಿ ಪಿ.ಎಸ್. ಹಾಗೂ ಕೂಡಿಗೆ ಸರ್ಕಾರಿ ಕ್ರೀಡಾ ಪ್ರೌಢಶಾಲೆಯ ಸಮೀರ್ ಪಾಶಾ ಜಂಟಿಯಾಗಿ ವೈಯಕ್ತಿಕ ಚಾಂಪಿಯನ್ ಶಿಫ್ ಹಂಚಿ ಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಮಂಗಳೂರು ಸಂತ ಮೇರೀಸ್ ಪ್ರೌಢಶಾಲೆಯ ಸೌಜನ್ಯ ಗೆದ್ದಿದ್ದಾರೆ. 18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕಾಲ್ಸ್ನ ದರ್ಶನ್ ಹಾಗೂ ಬಾಲಕಿಯರ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಪ.ಪೂ. ಕಾಲೇಜಿನ ಜ್ಯೋತಿಕಾ ಎಲ್ಲ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಸಾಧನೆ ಮಾಡಿದ್ದಾರೆ.
ಇದೇ ಸಂದರ್ಭ ಮಾಧ್ಯಮ ದೊಂದಿಗೆ ಮಾತನಾಡಿದ ಎಎಸ್ಎ¥sóïನ ಮುಖ್ಯಸ್ಥೆ ಅಶ್ವಿನಿ ನಾಚಪ್ಪ ಅವರು, ಮುಂದಿನ ವರ್ಷದಲ್ಲಿ ಮತ್ತಷ್ಟು ಕ್ರೀಡಾ ಪಟುಗಳು ಭಾಗವಹಿ ಸಲು ಯೋಜನೆ ರೂಪಿಸಲಾಗುವದು ಎಂದರು. ಸ್ಪರ್ಧೆಯ ತೀರ್ಪು ಗಾರರಾಗಿ ಜಗದೀಶ್, ಎ.ಕೆ. ಚೇತನ್, ರಘು, ರಜಿತ್, ಜೀವನ್, ಮೋನಿಕಾ, ರಾಜೇಂದ್ರ ನಾಯಕ್ ಮತ್ತು ಶಾಲಾ ಶಿಕ್ಷಕಿಯರು ಕಾರ್ಯ ನಿರ್ವಹಿಸಿದರು. ಕ್ರೀಡಾ ಕಾರ್ಯಕ್ರಮದ ನಿರೂಪಣೆಯನ್ನು ಕಾವೇರಿ ಚಂಗಪ್ಪ, ಮುತ್ತಮ್ಮ ಮತ್ತು ಬೋಜಮ್ಮ ನಿರ್ವಹಿಸಿದರು. ಪ್ರಾಂಶುಪಾಲೆ ಗೌರಮ್ಮ ನಂಜಪ್ಪ ಕ್ರೀಡೋತ್ಸವದ ಉಸ್ತುವಾರಿ ವಹಿಸಿದ್ದರು.
- ಟಿ.ಎಲ್.ಶ್ರೀನಿವಾಸ್