ವೀರಾಜಪೇಟೆ, ಡಿ. 4: ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಸಾಕ್ಷಿಯೇ ಮೂಲ ಆಧಾರ. ಪ್ರಕರಣದ ತನಿಖೆ ವಿಳಂಬವಾದರೆ ಕೆಲವು ಸಂದರ್ಭದಲ್ಲಿ ಸಾಕ್ಷಿಯೇ ನಾಶವಾಗುತ್ತದೆ. ಆ ಸಂದರ್ಭದಲ್ಲಿ ಪೊಲೀಸರು ತನಿಖೆಯಿಂದ ವೈಜ್ಞಾನಿಕವಾದ ಸಾಕ್ಷಿಯನ್ನು ಪಡೆದು ಪ್ರಕರಣದ ಸಾಕ್ಷಿಯನ್ನು ಸಂಗ್ರಹಿಸ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಪೊಲೀಸರಿಗಾಗಿ ವೀರಾಜಪೇಟೆಯ ಮಗ್ಗುಲದಲ್ಲಿರುವ ದಂತ ವೈದ್ಯಕೀಯ ಕಾಲೇಜು ಆಯೋಜಿಸಿರುವ ಫೊರೆನ್‍ಸಿಕ್ ಒಡೊಂಟಾಲಜಿ ಕಾರ್ಯಾಗಾರ ಪೊಲೀಸ್ ಇಲಾಖೆಯ ತನಿಖಾ ಅಧಿಕಾರಿಗಳಿಗೆ ಉಪಯುಕ್ತವಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಸುಮನ್ ಹೇಳಿದರು.

ವೀರಾಜಪೇಟೆ ಮಗ್ಗಲ ಗ್ರಾಮದಲ್ಲಿರುವ ಕೊಡಗು ದಂತ ವೈದ್ಯಕೀಯ ಕಾಲೇಜಿನ ಸಭಾಂಗಣ ದಲ್ಲಿ ಇಂದು ಆಯೋಜಿಸಿದ್ದ ಫೊರೆನ್‍ಸಿಕ್ ಒಡೊಂಟಾಲಜಿ (ವಿಧಿವಿಜ್ಞಾನ ದಂತ ಶಾಸ್ತ್ರ) ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಧಿವಿಜ್ಞಾನ ದಂತ ಶಾಸ್ತ್ರದ ಕಾರ್ಯಾಗಾರದ ಮೂಲಕ ಅಪರಾಧ ಪ್ರಕರಣವನ್ನು ಪತ್ತೆ ಹಚ್ಚಲು ಈ ಕಾರ್ಯಾಗಾರ ಪೊಲೀಸರಿಗೆ ಸಹಕಾರಿಯಾಗಲಿದೆ. ಪೊಲೀಸರಿಗೆ ಅಪರಾಧದ ತನಿಖೆ ಸಂದರ್ಭ ಗಾಯಾಳು ವ್ಯಕ್ತಿಯ ಗುರುತು ಪತ್ತೆಗೂ ದಂತ ವೈದ್ಯಕೀಯ ಸಹಕಾರ ನೀಡಲಿದೆ. ಪೊಲೀಸರಿಗೆ ಕೆಲವು ಸಂದರ್ಭಗಳಲ್ಲಿ ಒತ್ತಡದ ಭಾವನೆ ಕಾಡುತ್ತಿದ್ದರೂ ವಿರಾಮ ಮಾಡಿಕೊಂಡು ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸಿದರೆ ತನಿಖಾಧಿಕಾರಿಗಳಿಗೂ ಇಲಾಖೆಗೂ ಪ್ರಯೋಜನವಾಗಲಿದೆ ಎಂದರು.

ಕೊಡಗು ದಂತ ವೈದ್ಯಕೀಯ ಕಾಲೇಜಿನ ಫೊರೆನ್‍ಸಿಕ್ ವಿಭಾಗದ ಉಪನ್ಯಾಸಕಿ ಅರ್ಚನ ಉಪನ್ಯಾಸ ನೀಡಿ, ಇತ್ತೀಚಿನ ದಿನಗಳಲ್ಲಿ ಫೊರೆನ್‍ಸಿಕ್ ಒಡೊಂಟಾಲಜಿ ಸಂಶೋಧನಾ ಕ್ಷೇತ್ರ ಬಹಳ ಪ್ರಮುಖವಾಗಿದೆ. ವಿಧಿವಿಜ್ಞಾನ ದಂತ ಶಾಸ್ತ್ರದಿಂದ ಪ್ರಾಯೋಗಿಕವಾಗಿ ಅನೇಕ ರೀತಿಯಲ್ಲಿ ನಿಖರ ಸಾಕ್ಷಿಯನ್ನು ಪರಿಗಣಿಸಬಹುದು ಎಂದು ಸಾಬೀತಾಗಿರುವ ಕಾರಣ ಇದನ್ನು ಅಪರಾಧ ಪತ್ತೆ ತನಿಖೆಯಲ್ಲಿ ಬಳಸಬಹುದು. ಹಲ್ಲಿನಿಂದ ಹಾಗೂ ಹಲ್ಲಿಗೆ ಸಂಬಂzsಪಟ್ಟಂತೆ ದೊರೆತಿರುವ ಸಾಕ್ಷಿಗಳು ಹಿಂದಿನಿಂದಲೂ ಆರಕ್ಷಕರಿಗೆ ತನಿಖೆ ನಡೆಸಲು ಸಹಕಾರಿಯಾಗಿ ಅಪರಾಧಗಳು ನ್ಯಾಯಾಲಯಗಳಲ್ಲಿ ಪರಿಹಾರವನ್ನು ಕಂಡಿವೆ. ಮುಂದೆ ಭವಿಷ್ಯದಲ್ಲಿಯೂ ಇವು ಸಾಕ್ಷಿಯ ರೂಪದಲ್ಲಿ ನ್ಯಾಯಾಲಯದಲ್ಲಿ ಬಳಕೆಯಾಗುವದರಲ್ಲಿ ಸಂದೇಹ ಇಲ್ಲ ಎಂದು ಹೇಳಿದರು. ಅಧ್ಯಕ್ಷತೆಯನ್ನು ದಂತ ಕಾಲೇಜಿನ ಡೀನ್ ಡಾ: ಸುನೀಲ್ ಮುದ್ದಯ್ಯ ವಹಿಸಿದ್ದರು.

ವೇದಿಕೆಯಲ್ಲಿ ಮಡಿಕೇರಿ ಡಿವೈಎಸ್.ಪಿ ದಿನೇಶ್‍ಕುಮಾರ್, ಸೋಮವಾರಪೇಟೆ ಡಿ.ವೈ.ಎಸ್.ಪಿ ಮುರಳೀಧರ್, ವೀರಾಜಪೇಟೆ ಡಿ.ವೈ.ಎಸ್.ಪಿ ಜಯಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ: ಕೆ.ಸಿ. ಪೊನ್ನಪ್ಪ, ಉಪ ಪಾÀ್ರಂಶುಪಾಲ ಡಾ ಜಿತೇಶ್ ಜೈನ್, ಡಾ: ಶಶಿಧರ್ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಇಲ್ಲಿನ ವೃತ್ತ ನಿರೀಕ್ಷಕ ಕ್ಯಾತೆಗೌಡ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.