ನಾಪೆÇೀಕ್ಲು, ಡಿ. 5: ನಾಲ್ಕುನಾಡು ವ್ಯಾಪ್ತಿಯಲ್ಲಿ ಈ ವರ್ಷ ಅವಧಿಗೆ ಮುಂಚೆಯೇ ಅರೆಬಿಕಾ, ಕಾವೇರಿ ಕಾಫಿ ಹಣ್ಣಾಗಿದೆ. ಭತ್ತದ ಗದ್ದೆಗಳು ಕುಯ್ಲಿಗೆ ಕಾಯುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಅಕಾಲಿಕ ಮಳೆ, ಮೋಡ ತುಂಬಿದ ವಾತಾವರಣ ಕೃಷಿಕರಲ್ಲಿ ಆತಂಕ ಮೂಡಿಸಿದೆ.
ಮುಂಗಾರು ಆರಂಭದಲ್ಲಿ ಸುರಿದ ಭಾರಿ ಮಳೆ ಮತ್ತು ಗಾಳಿಯ ಪರಿಣಾಮ ಕಾಫಿ ಫಸಲು ಉದುರಿ ನಷ್ಟ ಸಂಭವಿಸಿತ್ತು. ಈಗ ಸುರಿಯುತ್ತಿರುವ ಮಳೆಯ ಕಾರಣದಿಂದ ಗಿಡಗಳಲ್ಲಿ ಹಣ್ಣಾದ ಕಾಫಿ ಕುಯ್ಯಲು ಸಾಧ್ಯವಾಗದೆ ನಷ್ಟವಾಗುತ್ತಿದೆ ಎಂದು ಬೆಳೆಗಾರರು ಚಿಂತಿಸುವಂತಾಗಿದೆ. ಕಾಳುಮೆಣಸು ಬೆಳೆ ಕೂಡ ರೋಗಕ್ಕೆ ಗುರಿಯಾಗಿದ್ದು, ಬೆಳೆಗಾರರು ತತ್ತರಿಸಿದ್ದಾರೆ. ಪ್ರಸ್ತುತ ಬೀಳುತ್ತಿರುವ ಮಳೆಯಿಂದ ಈ ವರ್ಷದ ಭತ್ತ, ಕಾಫಿ ಫಸಲನ್ನು ಹೇಗೆ ಜತನ ಮಾಡುವದು ಎಂಬ ಭೀತಿ ಜನರಲ್ಲಿ ಮೂಡಿದೆ.
ರೋಬಸ್ಟಾ ಹಾಗೂ ಅಂತರ ಬೆಳೆಯಾಗಿ ಬೆಳೆಯುತ್ತಿರುವ ಕಾವೇರಿ, ಕಟುವಾಯಿ ಮೊದಲಾದ ಕಾಫಿಗಳು ಹಣ್ಣಾಗಿದ್ದು, ಕಾಫಿ ಕುಯ್ಲು ಆರಂಭವಾಗಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ಕಂಗೆಟ್ಟಿರುವ ಬೆಳೆಗಾರರಿಗೆ ಕುಯ್ದ ಕಾಫಿಯನ್ನು ಒಣಗಿಸಲು ಸಾಧ್ಯವಾಗದೆ ಗೋದಾಮುಗಳಲ್ಲಿ ರಾಶಿ ಹಾಕಿ ಇದೀಗ ಅವು ಕೊಳೆಯುವ ದುಸ್ಥಿತಿ ಸೃಷ್ಟಿಯಾಗಿದೆ.
ಭತ್ತದ ಕೃಷಿಗೆ ಕಾಡು ಹಂದಿ ಕಾಟ: ಈ ಸಮಸ್ಯೆಯಿಂದ ಭತ್ತದ ಕೃಷಿಕರೂ ಹೊರತ್ತಾಗಿಲ್ಲ. ಕೂಲಿ ಕಾರ್ಮಿಕರ ಕೊರತೆ ಹಾಗೂ ಇತರ ತೊಂದರೆಗಳಿಂದ ಭತ್ತ ಬೆಳೆಯುವವರು ವಿರಳವಾಗಿರುವ ಈ ಕಾಲದಲ್ಲಿ ತಮ್ಮ ಸಾಂಪ್ರದಾಯಿಕ ಕೃಷಿಯಾದ ಭತ್ತದ ಬೆಳೆಯನ್ನು ಕೆಲವರು ನಷ್ಟವಾದರೂ ಪರವಾಗಿಲ್ಲ ಎಂದು ಬೆಳೆಯುತ್ತಿದ್ದಾರೆ. ಆದರೆ ಭತ್ತದ ಕೃಷಿಗೆ ಈಗ ಕಾಡು ಹಂದಿಯ ಕಾಟ ಆರಂಭವಾಗಿದೆ. ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಕೃಷಿಕರು. ಭತ್ತದ ಬೆಳೆ ಕಟಾವಿಗೆ ಸಿದ್ದವಾಗಿದ್ದು ಕೈಗೆ ಬಂದಿರುವ ತುತ್ತು ಬಾಯಿಗೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕತ್ತಲಾಗುತ್ತಿದ್ದಂತೆಯೇ ಭತ್ತದ ಗದ್ದೆಗಳಿಗೆ ಕಾಡು ಹಂದಿಗಳು ಮುಗಿ ಬೀಳುತ್ತವೆ. ಇದರ ನಷ್ಟಕ್ಕೂ ಸರಕಾರ ಪರಿಹಾರ ನೀಡುವಂತಾಗಬೇಕು ಎನ್ನುತ್ತಾರೆ ಭತ್ತದ ಕೃಷಿಕ ಯವಕಪಾಡಿ ಗ್ರಾಮದ ಬಡಕಡ ಸುರೇಶ್ ಬೆಳ್ಯಪ್ಪ.
ಕಾಳುಮೆಣಸನ್ನು ಅಂತರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಅದು ಕೂಡ ರೋಗ ಭಾದೆಯಿಂದ ಸಂಪೂರ್ಣವಾಗಿ ನೆಲಕಚ್ಚಿದೆ. ಈ ಮಳೆಯಿಂದಾಗಿ ಮತ್ತೆ ಹಳದಿ ರೋಗ ಮತ್ತು ಕೊಳೆರೋಗ ಕಂಡು ಬಂದಿದ್ದು ಸಾಲು ಸಾಲು ಮೆಣಸಿನ ಬಳ್ಳಿಗಳು ನಾಶವಾಗುತ್ತಿವೆ. ಇದಕ್ಕೆ ಒಮ್ಮೆ ರೋಗ ಕಾಣಿಸಿಕೊಂಡರೆ ಹತೋಟಿಗೆ ತರಲು ತುಂಬಾ ಕಷ್ಟ ಎಂಬ ಮಾತು ಬೆಳೆಗಾರರಿಂದ ಕೇಳಿ ಬರುತ್ತಿದೆ. -ಪಿ.ವಿ. ಪ್ರಭಾಕರ್