ವೀರಾಜಪೇಟೆ, ಡಿ. 3: ವಿಶ್ವದ ಅನೇಕ ರಾಷ್ಟ್ರಗಳ ಪೈಕಿ ಅತೀ ದೊಡ್ಡ ಸಂವಿಧಾನವನ್ನು ಹೊಂದಿರುವ ಭಾರತ ದೇಶವು ಒಂದು. ಭಾರತದ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಐಕ್ಯತೆಗಳನ್ನು ಸಾಧಿಸುವಲ್ಲಿ ನ್ಯಾಯಾಂಗವು ಒಂದು ಪ್ರಮುಖ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅಭಿಪ್ರಾಯಪಟ್ಟರು.
ಸಂವಿಧಾನ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಸಂವಿಧಾನದ ಆಶಯಗಳನ್ನು ಜಾರಿಗೆ ತರುವಲ್ಲಿ ನ್ಯಾಯಾಂಗ ಹಾಗೂ ವಕೀಲರ ಪಾತ್ರ ಬಹುಮುಖ್ಯ. ಸಂವಿಧಾನದ ಆಶಯವನ್ನು ಜಾರಿಗೊಳಿಸಲು ವಕೀಲರು ತಳಪಾಯವಿದ್ದಂತೆ, ಸಮಾಜದಲ್ಲಿ ಯಾವದೇ ಕಟ್ಟಕಡೆಯ ವ್ಯಕ್ತಿಯು ನ್ಯಾಯಾಲಯದ ಮೇಲೆ ಇಟ್ಟಿರುವ ನಂಬಿಕೆಗೆ ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಜಿ. ರಮಾ, ಸಿವಿಲ್ ಹಿರಿಯ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್, ಪ್ರಿನ್ಸಿಫಲ್ ಮುನ್ಸಿಫ್ ಕೋರ್ಟ್‍ನ ನ್ಯಾಯಾಧೀಶ ಎನ್.ವಿ. ಕೋನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ವೆಂಕಟೇಶ್ ಹಾಗೂ ಹಿರಿಯ ಮತ್ತು ಕಿರಿಯ ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದರು.
ನ್ಯಾಯಾಲಯದ ಆವರಣದಲ್ಲಿ ನೂತನ ನೀರಿನ ಘಟಕವನ್ನು ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಉದ್ಘಾಟಿಸಿದರು.