ಮಡಿಕೇರಿ, ಡಿ. 3: ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಸಂಬಂಧಿಸಿದಂತೆ ಸಲಹಾ ಸಮಿತಿ ಸಭೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 4 ಸರ್ಕಾರಿ ಮತ್ತು 22 ಖಾಸಗಿ ಕೇಂದ್ರಗಳಿವೆ ಎಂದು ಮಾಹಿತಿ ನಿಡಿದರು.

ಖಾಸಗಿ ಕೇಂದ್ರಗಳು ಕಡ್ಡಾಯವಾಗಿ ನೋಂದಣಿ ಮಾಡಬೇಕು. ನೋಂದಣಿ ಮಾಡಿರುವ ಕೇಂದ್ರಗಳು ಕಾಲಕಾಲಕ್ಕೆ ನವೀಕರಣ ಮಾಡಬೇಕು. ಈ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು. ನವೀಕರಣ ಮಾಡದಿರುವ ಕೇಂದ್ರಗಳು ಇದ್ದಲ್ಲಿ ಮುಂದಿನ ಕ್ರಮ ವಹಿಸಬೇಕಾಗುತ್ತದೆ ಎಂದು ಡಿಹೆಚ್‍ಒ ಎಚ್ಚರಿಕೆ ನೀಡಿದರು.

ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳ ತಂಡ ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು. ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್ ಅವರು ಅಕ್ಟೋಬರ್ ತಿಂಗಳಲ್ಲಿ ಎರಡು ಕೇಂದ್ರಗಳಿಗೆ, ನವೆಂಬರ್ ತಿಂಗಳಲ್ಲಿ ಆರು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಗೋಪಿನಾಥ್, ಸಮಿತಿ ಸದಸ್ಯೆ ಒಡಿಪಿ ಸಂಸ್ಥೆಯ ಲೀನಾ ಲೋಬೋ, ಆಶೋದಯ ಸಮಿತಿಯ ತುಳಸಿ ಇತರರು ಇದ್ದರು.