ಮಡಿಕೇರಿ, ಡಿ. 3: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ, ಸ್ವಚ್ಛ ಭಾರತ ಅಭಿಯಾನ ಯೋಜನೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಹಾಗೂ ಕೂರ್ಗ್ ಸೈನ್ಸ್ ಅಂಡ್ ಎನ್ವಿರಾನ್‍ಮೆಂಟಲ್ ಫೌಂಡೇಶನ್ ಆಶ್ರಯದಲ್ಲಿ ತಾ. 7 ರಂದು ಬೆಳಿಗ್ಗೆ 9.30 ಕ್ಕೆ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನಲ್ಲಿ ಕೊಡಗು ಜಿಲ್ಲಾ ಮಟ್ಟದ 27ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2019 ಹಾಗೂ ಸ್ವಚ್ಛ ಹಸಿರು ಮತ್ತು ಪರಿಸರ ಜಾಗೃತಿ ಅಭಿಯಾನ ಏರ್ಪಡಿಸಲಾಗಿದೆ.
ಸಮಾವೇಶದಲ್ಲಿ “ಸ್ವಚ್ಛ, ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು” ಎಂಬ ಕೇಂದ್ರ ವಿಷಯದಡಿ ವಿವಿಧ ಉಪ-ವಿಷಯಗಳ ಅಭ್ಯಾಸಾತ್ಮಕ ಚಟುವಟಿಕೆ ಕುರಿತು 2 ಮಂದಿ ವಿದ್ಯಾರ್ಥಿಗಳ ತಂಡವು ತಮ್ಮ ಶಿಕ್ಷಕರ ಮಾರ್ಗದರ್ಶನದೊಂದಿಗೆ ವಿಜ್ಞಾನಿಗಳ ಮಾದರಿಯಲ್ಲಿ ಸಮೀಕ್ಷೆ ಕೈಗೊಂಡು ವೈಜ್ಞಾನಿಕ ಯೋಜನಾ ವರದಿ(ಸೈನ್ಸ್ ಪ್ರಾಜೆಕ್ಟ್)ಯನ್ನು ತಯಾರಿಸಿ ಪ್ರಬಂಧ ಮಂಡಿಸಲಿದ್ದಾರೆ ಎಂದು ಸಮಾವೇಶದ ಸಂಘಟಕ ಹಾಗೂ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ. ಈ ಸಮಾವೇಶವು 10 ರಿಂದ 17 ವರ್ಷ ವಯೋಮಾನದ ಮಕ್ಕಳಿಗೆ ಕೇಂದ್ರ ವಿಷಯದಡಿ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಿ ವೈಜ್ಞಾನಿಕ ಯೋಜನೆ ತಯಾರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅನ್ವೇಷಣೆಯ ಸ್ವಭಾವ ಕಂಡುಕೊಳ್ಳುವದರೊಂದಿಗೆ ಸ್ಥಳೀಯ ಪರಿಸರ ಸಮಸ್ಯೆಗಳಿಗೆ ಸ್ವತಃ ತಾವೇ ಸಮೀಕ್ಷೆ ನಡೆಸಿ ಕಾರ್ಯಸಾಧ್ಯ ಪರಿಹಾರ ಕಂಡುಕೊಳ್ಳುವ ಮೂಲಕ ಅವರಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಲು ಸಹಕಾರಿಯಾಗಿದೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಜಿ. ಶ್ರೀಹರ್ಷ ತಿಳಿಸಿದ್ದಾರೆ.
ಜಿಲ್ಲಾಮಟ್ಟದಲ್ಲಿ ಉತ್ತಮ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿ ಆಯ್ಕೆಗೊಳ್ಳಲಿರುವ ಮೊದಲ 10 ತಂಡಗಳು ತಾ. 16-18 ರಂದು ಮೂರು ದಿನಗಳ ಕಾಲ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ 27ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲೂ ಮತ್ತು ರಾಜ್ಯಮಟ್ಟದಲ್ಲಿ ಆಯ್ಕೆಯಾಗುವ ತಂಡಗಳು ತಾ. 27-31, ರಂದು 5 ದಿನಗಳ ಕಾಲ ಕೇರಳದ ತಿರುವನಂತಪುರ ನಗರದಲ್ಲಿ ಜರುಗುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ ಎಂದು ಸಮಾವೇಶದ ಜಿಲ್ಲಾ ಶೈಕ್ಷಣಿಕ ಸಂಯೋಜಕ ಎಂ.ಎನ್. ವೆಂಕಟನಾಯಕ್ ತಿಳಿಸಿದ್ದಾರೆ. ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಸಮಾವೇಶದ ಸಂಘಟಕ 9448588352, 9481431263 ಸಂಪರ್ಕಿಸಬಹುದಾಗಿದೆ.