ಸೋಮವಾರಪೇಟೆ,ಡಿ.3: ಸಮೀಪದ ಸಿದ್ಧಲಿಂಗಪುರ-ಅರಿಶಿಣಗುಪ್ಪೆ ಗ್ರಾಮದಲ್ಲಿನ ಶ್ರೀಮಂಜುನಾಥ ಮತ್ತು ನವನಾಗನಾಥ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ಸುಬ್ರಹ್ಮಣ್ಯ ಶಾಂತಿ ಹೋಮ ನಡೆಯಿತು.
ಕೊಡಗಿನ ನಾಗಕ್ಷೇತ್ರಗಳಲ್ಲಿ ತನ್ನದೇ ವಿಶೇಷತೆ ಹೊಂದಿರುವ ಅರಶಿಣಗುಪ್ಪೆ ನವನಾಗಕ್ಷೇತ್ರದಲ್ಲಿ ಬೆಳಿಗ್ಗೆ 7ರಿಂದ ಪೂಜಾ ಕೈಂಕರ್ಯಗಳು ಆರಂಭವಾಯಿತು. ದೇವಾಲಯದ ಗುರುಗಳಾದ ರಾಜೇಶ್‍ನಾಥ್‍ಜಿ ಮಾರ್ಗದರ್ಶನದಲ್ಲಿ ಹಾಗೂ ಪ್ರಧಾನ ಅರ್ಚಕ ಜಗದೀಶ್ ಉಡುಪ ಪೌರೋಹಿತ್ಯದಲ್ಲಿ ಶಾಂತಿ ಹೋಮ ನಡೆಸಲಾಯಿತು. ನಾಗದೇವರಿಗೆ ತಂಬಿಲ ಸೇವೆ, ಕ್ಷೀರಾಭಿಷೇಕ, ಎಳನೀರು ಅಭಿಷೇಕದ ನಂತರ ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಕ್ಷೇತ್ರದ ಪ್ರಧಾನ ದೇವರಾದ ಶ್ರೀಮಂಜುನಾಥನ ಸನ್ನಿಧಿಯಲ್ಲಿ ಗಣಪತಿಹೋಮ, ರುದ್ರಾಭಿಷೇಕ ನಡೆಯಿತು. ಪೂಜಾ ಕೈಂಕರ್ಯದಲ್ಲಿ ಅರ್ಚಕರಾದ ವಾದಿರಾಜ್, ಪ್ರಸಾದ್‍ಭಟ್, ಕೋಲಾರದ ರಂಗಾಚಾರ್ ಮತ್ತಿತರರು ಪಾಲ್ಗೊಂಡಿದ್ದರು.
ಗಣಪತಿ ಯುವಕ ಸಂಘ, ದೇವಾಲಯ ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು, ಊರಿನ ಪ್ರಮುಖರು ಹಾಗೂ ಗ್ರಾಮಸ್ಥರು ಷಷ್ಠಿ ಪೂಜೆ ವೇಳೆ ಸಹಕರಿಸಿದರು. ಈ ಸಂದರ್ಭ ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ನೆರದಿದ್ದ ಎಲ್ಲಾ ಭಕ್ತ ವೃಂದಕ್ಕೆ ಅನ್ನದಾನ ಏರ್ಪಡಿಸಲಾಗಿತ್ತು.