ಸೋಮವಾರಪೇಟೆ,ಡಿ.3: ಪಟ್ಟಣದಿಂದ ಶಾಂತಳ್ಳಿ ಮಾರ್ಗವಾಗಿ ಬೆಂಕಳ್ಳಿ ಗ್ರಾಮಕ್ಕೆ ವೆಟ್ಮಿಕ್ಸ್ ಸಾಗಿಸುತ್ತಿದ್ದ ಟಿಪ್ಪರ್ ವಾಹನವೊಂದು, ಶಾಂತಳ್ಳಿ ಸಮೀಪದ ಪಟ್ಟಣಕೊಲ್ಲಿ ಎಂಬಲ್ಲಿ ಆಕಸ್ಮಿಕವಾಗಿ 30 ಅಡಿ ಪ್ರಪಾತಕ್ಕೆ ಉರುಳಿದ ಘಟನೆ ಇಂದು ಬೆಳಗ್ಗೆ ಸಂಭವಿಸಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುತ್ತಿಗೆದಾರ ಟಿ.ಆರ್. ಪುರುಷೋತ್ತಮ್ ಎಂಬವರಿಗೆ ಸೇರಿದ ಟಿಪ್ಪರ್ನಲ್ಲಿ ಕೊಡ್ಲಿಪೇಟೆ ಸಮೀಪದ ಕೆರಗನಹಳ್ಳಿ ನಿವಾಸಿ ಉದಯ ಕುಮಾರ್ ಎಂಬವರು ಇತರ ಕಾರ್ಮಿಕರೊಂದಿಗೆ ಬೆಂಕಳ್ಳಿಗೆ ವೆಟ್ಮಿಕ್ಸ್ ಸಾಗಿಸುತ್ತಿದ್ದರು.
ಇಂದು ಬೆಳಿಗ್ಗೆ 10.45ರ ಸುಮಾರಿಗೆ ಶಾಂತಳ್ಳಿ ಸಮೀಪದ ಪಟ್ಟಣಕೊಲ್ಲಿ ತಿರುವಿನಲ್ಲಿ ಎದುರಾದ ಸರ್ಕಾರಿ ಬಸ್ಗೆ ಸ್ಥಳಾವಕಾಶ ಕಲ್ಪಿಸಲೆಂದು ರಸ್ತೆಯ ಪಕ್ಕಕ್ಕೆ ಟಿಪ್ಪರ್ನ್ನು ನಿಲ್ಲಿಸಿದ ಸಂದರ್ಭ, ಏಕಾಏಕಿ ಮಣ್ಣು ಕುಸಿದು ಟಿಪ್ಪರ್ ಪ್ರಪಾತಕ್ಕೆ ಬಿದ್ದಿದೆ.
ಈ ಸಂದರ್ಭ ಟಿಪ್ಪರ್ ಚಾಲಕ ಉದಯಕುಮಾರ್ ವಾಹನದಿಂದ ಜಿಗಿದರೆ, ಉಳಿದ ಈರ್ವರು ಕಾರ್ಮಿಕರಾದ ಹಾವೇರಿ ಜಿಲ್ಲೆಯ ಯಲ್ಲಪ್ಪ ಮತ್ತು ನವಾಜ್ ಅವರುಗಳು ಟಿಪ್ಪರ್ನೊಳಗೆ ಸಿಲುಕಿಕೊಂಡು ಸುಮಾರು 30 ಅಡಿಗಳಷ್ಟು ಕಂದಕಕ್ಕೆ ಉರುಳಿ ಹೋಗಿದ್ದಾರೆ. ಪರಿಣಾಮ ಈರ್ವರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯ ದಿಂದ ಪಾರಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಟಿಪ್ಪರ್ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ರಸ್ತೆಯ ಬದಿಯಲ್ಲಿ ಚರಂಡಿ ತೆಗೆದು ಕೇಬಲ್ ಅಳವಡಿಸಿದ ನಂತರ ಮಣ್ಣು ಮುಚ್ಚಲಾಗಿತ್ತು. ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಮಣ್ಣಿನಲ್ಲಿ ತೇವಾಂಶ ಅಧಿಕಗೊಂಡಿದ್ದು, ಟಿಪ್ಪರ್ ವಾಹನದ ಭಾರ ತಾಳಲಾರದೇ ಕುಸಿತ ಉಂಟಾಗಿದೆ. ಇದರಿಂದಾಗಿ ಡಾಂಬರು ರಸ್ತೆಗೂ ಹಾನಿಯಾಗಿದೆ.
ಡಾಂಬರು ರಸ್ತೆಯ ಪಕ್ಕದಲ್ಲಿ ಬಿರುಕು ಮೂಡಿದ್ದು, ಮುಂದಿನ ದಿನಗಳಲ್ಲಿ ಇತರ ವಾಹನಗಳ ಸಂಚಾರಕ್ಕೂ ಸಂಚಕಾರ ತಂದೊಡ್ಡಿದೆ. ತಕ್ಷಣ ಲೋಕೋಪಯೋಗಿ ಇಲಾಖಾ ಅಭಿಯಂತರರು ರಸ್ತೆಯನ್ನು ಸುಸ್ಥಿತಿಗೆ ತರಲು ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.