ಸೋಮವಾರಪೇಟೆ,ಡಿ.3: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸಾರ್ವಜನಿಕರಿಗೆ ಒಂದು ವಾರಗಳ ಕಾಲ ನಾಗರಿಕ ಬಂದೂಕು ತರಬೇತಿ ಶಿಬಿರ ಆಯೋಜಿಸಲಾಗಿದೆ.

ಶಿಬಿರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಶಸ್ತ್ರ ದಳದ ವೃತ್ತ ನಿರೀಕ್ಷಕರಾದ ರಾಚಯ್ಯ ಮಾತನಾಡಿ, ಕೋವಿಯನ್ನು ಸದ್ಬಳಕೆಯ ಉದ್ದೇಶದಿಂದ ಉಪಯೋಗಿಸಿದರೆ ಮಾತ್ರ ಅದರ ಮಹತ್ವದ ಅರಿವಾಗುತ್ತದೆ ಎಂದರು.

ಕೆಲವರು ಕೋವಿಯನ್ನು ಕ್ರಿಮಿನಲ್ ಪ್ರಕರಣಗಳಿಗೆ ಮಾತ್ರ ಬಳಸುವದು ಎಂಬ ತಪ್ಪು ಉದ್ದೇಶ ಹೊಂದಿದ್ದಾರೆ. ಕೋವಿಯನ್ನು ಹೊಂದಿರುವವರು ಸೂಕ್ತ ತರಬೇತಿಯನ್ನು ಪಡೆಯಬೇಕಾದುದು ಅತ್ಯಾವಶ್ಯಕ.

ವನ್ಯಪ್ರಾಣಿಗಳು ಮತ್ತು ಸಮಾಜಘಾತುಕ ಶಕ್ತಿಗಳಿಂದ ಆಕ್ರಮಣವಾದಾಗ ಸ್ವರಕ್ಷಣೆಗೆ ಕೋವಿಯನ್ನು ಇಟ್ಟುಕೊಳ್ಳಬೇಕೇ ವಿನಃ ಅನಾವಶ್ಯಕವಾಗಿ ಉಪಯೋಗಿಸಲು ಮುಂದಾಗಬಾರದು ಎಂದರು.

ಅಜಾಗರೂಕತೆಯ ಬಳಕೆಯಿಂದ ಪ್ರಾಣ ಹಾನಿಯಾಗುವ ಸಂಭವ ಹೆಚ್ಚು. ಕೋವಿಯನ್ನು ಬಳಸುವ ಸಂದರ್ಭ ಸೂಕ್ಷ್ಮತೆ ಮತ್ತು ಎಚ್ಚರಿಕೆ ಅಗತ್ಯ ಎಂದು ಕಿವಿಮಾತು ಹೇಳಿದರು.

ಸೋಮವಾರಪೇಟೆ ಪೊಲೀಸ್ ವೃತ್ತನಿರೀಕ್ಷಕ ನಂಜುಂಡೇಗೌಡ ಮಾತನಾಡಿ, ಬಂದೂಕು ತರಬೇತಿಯ ಅವಧಿಯಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಮಹತ್ವ ನೀಡಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರು ತರಬೇತಿ ಪಡೆಯಲು ಅವಕಾಶವಿಲ್ಲ. ಎಲ್ಲರೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾ ಗದಂತೆ ಸಹಕರಿಸಬೇಕು ಎಂದರು.

ಜಿಲ್ಲಾ ಸಶಸ್ತ್ರ ದಳದ ಸಹಾಯಕ ಠಾಣಾಧಿಕಾರಿ ಹಾಗೂ ಶಿಬಿರದ ತರಬೇತುದಾರ ವೆಂಕಪ್ಪ ಅವರು, ಶಿಬಿರಾರ್ಥಿಗಳಿಗೆ ಬಂದೂಕು ತರಬೇತಿಯ ಬಗ್ಗೆ ಮಾಹಿತಿ ಒದಗಿಸಿದರು.

ವೇದಿಕೆಯಲ್ಲಿ ಸಹಾಯಕ ಠಾಣಾಧಿಕಾರಿ ಪುಟ್ಟಪ್ಪ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಗೌಡಳ್ಳಿ ಸುನಿಲ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸೋಮವಾರಪೇಟೆ ವ್ಯಾಪ್ತಿಯ 85 ಮಂದಿ ಬಂದೂಕು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.