ಮಡಿಕೇರಿ, ಡಿ. 3: ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿದ ಕಟ್ಟಡಗಳೆಲ್ಲವೂ ಗುಣಮಟ್ಟವಿಲ್ಲದೆ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಇದೊಂದು ಲೂಟಿಕೋರ ಸಂಸ್ಥೆಯಾಗಿದ್ದು, ಈ ಕೇಂದ್ರದ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸುವದಾಗಿ ಮಾಜಿ ಸಚಿವ ಯಂ.ಸಿ. ನಾಣಯ್ಯ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಯುತರು, ನಿರ್ಮಿತಿ ಕೇಂದ್ರದಿಂದ ಕೊಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆಯೆಂದು ಸಂಶಯ ವ್ಯಕ್ತಪಡಿಸಿದರಲ್ಲದೆ, ಈ ಸಂಸ್ಥೆ ನಡೆಸಿದ ಎಲ್ಲಾ ವ್ಯವಹಾರಗಳ ಬಗ್ಗೆ ವಿಶೇಷ ಲೆಕ್ಕಪರಿಶೋಧನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸ ಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಹೋಂ ಸ್ಟೇಗಳಿದ್ದು, ಕೇವಲ 500 ರಿಂದ 600 ಹೋಂ ಸ್ಟೇಗಳು ನೋಂದಣಿಯಾಗಿವೆ. ಅನೇಕ ಹೋಂಸ್ಟೇಗಳಲ್ಲಿ ಮೋಜು ಮಸ್ತಿ, ಜೂಜಾಟ, ರೇವ್ ಪಾರ್ಟಿ ಮತ್ತು ವೇಶ್ಯಾವಾಟಿಕೆಯ ದಂಧೆಗಳು ಕೂಡ ನಡೆಯುತ್ತಿದೆ ಎಂದು ಎಂ.ಸಿ.ನಾಣಯ್ಯ ಆರೋಪಿಸಿದರು. ತಕ್ಷಣ ಜಿಲ್ಲಾಡಳಿತ ಅನಧಿಕೃತ ಹೋಂಸ್ಟೇಗಳಿಗೆ ಬೀಗ ಜಡಿಯಬೇಕೆಂದು ಒತ್ತಾಯಿಸಿದರು.

ಕೊಡಗು ಜಿಲ್ಲೆಗೆ ಪರಿಸರ ಸ್ನೇಹಿ ಪ್ರವಾಸೋದ್ಯಮ ಬೇಕೆ ಹೊರತು ಮೋಜು ಮಸ್ತಿಯ ಪ್ರವಾಸೋದ್ಯಮ ಬೇಡವೆಂದರು.

ನಗರದ ರಾಜಾಸೀಟ್ ಉದ್ಯಾನವನದ ಬಳಿ ನೈಜ ಪ್ರಕೃತಿಗೆ ವಿರುದ್ಧವಾಗಿ ನಿರ್ಮಾಣಗೊಳ್ಳುತ್ತಿರುವ ‘ಕೂರ್ಗ್ ವಿಲೇಜ್’ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂದ ನಾಣಯ್ಯ, ಈ ಯೋಜನೆಗಾಗಿ ಖರ್ಚು ಮಾಡುತ್ತಿರುವ ಅನುದಾನವನ್ನು ರಾಜಾಸೀಟ್ ಉದ್ಯಾನವನದಲ್ಲಿ ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕೆಂದು ಒತ್ತಾಯಿಸಿದರು.

ಇಲ್ಲಿರುವ ಕೆರೆಯಿಂದ ರಾಜಾಸೀಟ್ ಉದ್ಯಾನವನದ ಗಿಡಗಳಿಗೆ ನೀರನ್ನು ಹಾಯಿಸುವದು ಮತ್ತು ಕೆರೆ ಇರುವ ಪ್ರದೇಶದಲ್ಲಿ ಸಸಿಗಳ ಅಭಿವೃದ್ಧಿಗಾಗಿ ಈ ಜಾಗವನ್ನು ಮೀಸಲಿಡಲಾಗಿತ್ತು. ಆದರೆ, ಇತ್ತೀಚಿನ ದಿಢೀರ್ ಬೆಳವಣಿಗೆಯಲ್ಲಿ ಈ ಹಸಿರ ಪರಿಸರವನ್ನು ಕಾಂಕ್ರಿಟೀಕರಣ ಗೊಳಿಸಲಾಗುತ್ತಿದೆ. ಕೂರ್ಗ್ ವಿಲೇಜ್ ಎನ್ನುವ ಹೆಸರಿನಲ್ಲಿ ಸುಮಾರು 15ಕ್ಕೂ ಹೆಚ್ಚಿನ ಗೂಡಂಗಡಿಗಳನ್ನು ನಿರ್ಮಿಸುವ ಮೂಲಕ ಸ್ವಚ್ಛ ಪರಿಸರವನ್ನು ಕೊಳಗೇರಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಯಂ.ಸಿ. ನಾಣಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.