ಗೋಣಿಕೊಪ್ಪ, ಡಿ.3: ಕೊಡಗು ಜಿಲ್ಲೆ ಆಗಸ್ಟ್ ತಿಂಗಳಲ್ಲಿ ಜಲ ದಿಗ್ಭಂದನಕ್ಕೆ ಒಳಗಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.ಈ ವೇಳೆ ಜಿಲ್ಲಾಡಳಿತ ನಿರಾಶ್ರಿತ ಕೇಂದ್ರಗಳನ್ನು ತೆರೆದು ಜನರಿಗೆ ರಕ್ಷಣೆ ನೀಡಿತ್ತು. ಕೇಂದ್ರದಲ್ಲಿದ್ದ ಜನರಿಗೆ ಸಕಾಲದಲ್ಲಿ ಆಹಾರ ಪೂರೈಕೆ ಮಾಡೋದಕ್ಕೆ ಸ್ಥಳೀಯ ವ್ಯಾಪಾರಿಗಳಿಂದ ಅಗತ್ಯ ವಸ್ತುಗಳನ್ನು ಸಂಬಂಧಪಟ್ಟ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಖರೀದಿಸಿತ್ತು. ಸ್ಥಳೀಯ ಪಂಚಾಯ್ತಿಯ ಅಧಿಕಾರಿಗಳ, ಸಿಬ್ಬಂದಿಗಳ ಪರಿಚಯದ ಮೇರೆ ಕೇಂದ್ರಕ್ಕೆ ಬೇಕಾದ ಆಹಾರ ಸಾಮಗ್ರಿಗಳನ್ನು ಸಾಲವಾಗಿ ನೀಡಿದ ವ್ಯಾಪಾರಸ್ಥರು ತಮ್ಮ ಕಷ್ಟ ಇದ್ದರೂ ಇದನ್ನು ಬದಿಗೊತ್ತಿ ಸಹಕಾರ ನೀಡಿದ್ದರು. ಆದರೆ ಸಂತ್ರಸ್ತರಿಗೆ ಪರಿಹಾರ ಸಿಕ್ಕಿದ್ದರೂ ಸಂತ್ರಸ್ತರಿಗಾಗಿ ವಿವಿಧ ವಸ್ತುಗಳನ್ನು ಪೂರೈಸಿದ ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಮಾತ್ರ ಘಟನೆ ನಡೆದು ನಾಲ್ಕು ತಿಂಗಳು ಕಳೆದರೂ ಆಹಾರ ಸಾಮಗ್ರಿಗಳ ಬಾಕಿ ಬರಬೇಕಾದ ಹಣ ಮಾತ್ರ ಇನ್ನೂ ಕೈ ಸೇರಿಲ್ಲ. ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯಲ್ಲಿ ಎರಡು ನಿರಾಶ್ರಿತರ ಕ್ಷೇಮಾ ಕೇಂದ್ರವನ್ನು ತೆರೆಯಲಾಗಿತ್ತು. ಎರಡು ಕೇಂದ್ರಗಳಿಗೆ 1,49,143 ಲಕ್ಷ ಹಣದ ದಿನಸಿ ಸಾಮಗ್ರಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ತುರ್ತಾಗಿ ಕ್ಷೇಮ ಕೇಂದ್ರಕ್ಕೆ ಖರೀದಿ ಮಾಡಲಾಗಿತ್ತು. 15ಕ್ಕೂ ಹೆಚ್ಚಿನ ಅಂಗಡಿಗಳಲ್ಲಿ ದಿನಸಿ, ತರಕಾರಿ, ಡೀಸೆಲ್ ಸೇರಿದಂತೆ ಜನರೇಟರ್, ಜೆರಾಕ್ಸ್ ಇತ್ಯಾದಿ ವಸ್ತುಗಳನ್ನು ಖರೀದಿಸಿ ನಂತರ ಹಣ ಪಾವತಿಸುವ ದಾಗಿ ಬಿಲ್ಲ್ ಪಡೆದು ತೆರಳಿದ್ದರು.
ಸಾ¯ವಾಗಿ ನೀಡಿದ ಸಾಮಗ್ರಿ ಗಳಿಗೆ ವ್ಯಾಪಾರಸ್ಥರಿಂದ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ ಪಡೆದು ತೆರಳಿದ ಒಡನೆ ಹಣ ಜಮಾ ಮಾಡುವದಾಗಿ ಭರವಸೆ ನೀಡಿ ತೆರಳಿದವರು
(ಮೊದಲ ಪುಟದಿಂದ) ಇಲ್ಲಿಯ ತನಕ ಹಣ ಸಂದಾಯಕ್ಕೆ ಕ್ರಮ ಕೈಗೊಂಡಿಲ್ಲ. ಇಂದು, ನಾಳೆ, ಹಣ ಬರುವ ಆಶಾಭಾವನೆಯಲ್ಲಿದ್ದ ನಗರದ ವ್ಯಾಪಾರಸ್ಥರು ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸುಸ್ತಾಗಿದ್ದರು. ಆದರೆ ನ್ಯಾಯಯುತವಾಗಿ ವ್ಯಾಪಾರಸ್ಥರಿಗೆ ನೀಡಬೇಕಾಗಿದ್ದ ಸರ್ಕಾರದ ಹಣವನ್ನು ನೀಡದೆ ಸ್ಥ್ತಳೀಯ ಅಧಿಕಾರಿಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಆಗಿದೆ. ಇದರಿಂದ ಮನನೊಂದ ವ್ಯಾಪಾರಸ್ಥರು ಸ್ಥಳೀಯ ಪಂಚಾಯ್ತಿ ಸದಸ್ಯರ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
2018ರಲ್ಲಿಯೂ ಕೊಡಗು ಜಿಲ್ಲೆಯಲ್ಲಿ ಜಲದಿಗ್ಬಂಧನ ಆಗಿತ್ತು. ಈ ವೇಳೆ ಜಿಲ್ಲಾಡಳಿತ ಜಿಲ್ಲೆಯ ಹಲವೆಡೆ ನಿರಾಶ್ರಿತ ಕೇಂದ್ರಗಳನ್ನು ತೆರೆದು ಜನರಿಗೆ ತಾತ್ಕಾಲಿಕ ಪರ್ಯಾಯ ವ್ಯವÀಸ್ಥೆ ಕಲ್ಪಿಸಿತ್ತು. ತಮ್ಮ ಕಷ್ಟದ ಸಂದರ್ಭದಲ್ಲೂ ಅಂಗಡಿಗಳನ್ನು ತೆರೆದು ವಸ್ತುಗಳನ್ನು ಪೂರೈಸಿದ್ದ ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಇಂದಿಗೂ ಹಣ ಸಿಕ್ಕಿಲ್ಲದಿರುವದು ನಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಪ್ರತಿ ವ್ಯಾಪಾರಿಗಳಿಗೂ 13, 14 ಸಾವಿರದವರೆಗೆ ಅಧಿಕಾರಿಗಳು ಬಿಲ್ಲನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇನ್ನು ಬಕೆಟ್, ಜಗ್, ಮ್ಯಾಟ್, ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಿದ್ದ ವ್ಯಾಪಾರಿಗಳಿಗೆ 25 ಸಾವಿರದವರೆಗೆ ಬಿಲ್ ಪಾವತಿಸಬೇಕಾಗಿದೆ. ಇತ್ತ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದಾಗ ವ್ಯಾಪಾರಿಗಳಿಗೆ ಆಗಿರುವ ಪ್ರಮಾದ ಒಪ್ಪಿಕೊಂಡಿದ್ದಾರೆ. ಆಗಸ್ಟ್ 8 ರಿಂದ 17ವರೆಗೆ ನಿತ್ಯ ಸಾವಿರಾರು ರೂಪಾಯಿ ವಸ್ತುಗಳನ್ನು ಖರೀದಿಸಿದ್ದಾರೆ. ಅಧಿಕಾರಿಗಳೇ ಸಿದ್ಧಪಡಿಸಿರುವ ಬಿಲ್ಲಿನ ಪಟ್ಟಿಯಲ್ಲಿ ಒಂದು 52,804 ರೂಪಾಯಿ ಬಾಕಿ ಇದ್ದರೆ ಮತ್ತೊಂದು ಪಟ್ಟಿಯಲ್ಲಿ 96,339 ರೂಪಾಯಿ ಉಳಿಸಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಬಡ ವ್ಯಾಪಾರಿಗಳಿಗೆ ನಾಳೆ ಕೊಡುತ್ತೇವೆ, ನಾಡಿದ್ದು ಕೊಡುತ್ತೇವೆ ಎಂದು ಕೇವಲ ಸಬೂಬು ಉತ್ತರ ನೀಡುತ್ತಿದ್ದಾರೆ.
ಹಣ ನೀಡಲು ಆಗ್ರಹ
ಈ ಬಾರಿ ಗೋಣಿಕೊಪ್ಪದಲ್ಲಿ ಪ್ರವಾಹ ಉಂಟಾಗಿದ್ದ ಸಂದರ್ಭ ಪರಿಹಾರ ಕೇಂದ್ರಕ್ಕೆ ಖರೀದಿಸಿದ್ದ ಸಾಮಗ್ರಿಗಳ ಹಣವನ್ನು ಸರ್ಕಾರ ಇನ್ನೂ ನೀಡದ ಕಾರಣ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಜೆ.ಕೆ. ಸೋಮಣ್ಣ ಆರೋಪಿಸಿದ್ದಾರೆ.
ಕೀರೆಹೊಳೆ ಪ್ರವಾಹದಿಂದ ಗೋಣಿಕೊಪ್ಪ ಪಟ್ಟಣದ 1 ಹಾಗೂ 4 ನೇ ವಾರ್ಡ್ನ ನಿವಾಸಿಗಳಿಗೆ ಸ್ಥಳೀಯ ಶಾಲೆಗಳಲ್ಲಿ ಸ್ಥಾಪಿಸಿದ್ದ ಪರಿಹಾರ ಕೇಂದ್ರಕ್ಕೆ ಖರೀದಿಸಿದ್ದ ವಸ್ತುಗಳಿಗೆ ಇನ್ನೂ ಹಣ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಸಬೂಬು ಹೇಳಿಕೊಂಡು ಅಧಿಕಾರಿಗಳು ದಿನ ದೂಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಸ್ಥಳೀಯ ವ್ಯಾಪಾರಿ ಸಲಾಂ ಅವರಿಂದ 13 ಸಾವಿರ ಹಣದ ತರಕಾರಿ ಖರೀದಿಸಿದ್ದರು. ಹ್ಯಾರಿಸ್ ಅವರಿಂದ 19 ಸಾವಿರ ಮೌಲ್ಯದ ದಿನಸಿ ಖರೀದಿಸಿ ಇನ್ನೂ ಹಣ ನೀಡಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರನ್ನು ಕೇಳಿದಾಗ ಹಣ ಬಂದಿಲ್ಲ. ನೀಡುತ್ತೇವೆ ಎನ್ನುವ ಉತ್ತರ ದೊರೆಯುತ್ತಿದೆ. ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಕರ್ತವ್ಯ ನಿರ್ವಹಿಸಬೇಕಿದೆ. ಜಿಲ್ಲಾಧಿಕಾರಿ ಮದ್ಯಪ್ರವೇಶಿಸಿ ಹಣ ವ್ಯಾಪಾರಿಗಳಿಗೆ ತಲುಪಿಸಲು ಸ್ಪಂಧಿಸಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯ ಮುರುಗ, ವ್ಯಾಪಾರಿಯಾದ ಸಲಾಂ, ಹ್ಯಾರೀಸ್, ಕೆ. ಸೋಮಣ್ಣ ಇದ್ದರು.