ಮಡಿಕೇರಿ, ಡಿ. 3: ‘ನಾವೂ ಎಲ್ಲರಂತೆ ಸಮಾನರು., ನಮಗೂ ಎಲ್ಲರಂತೆ ಆಡಲು., ಹಾಡಲು., ನರ್ತಿಸಲು ಬರುತ್ತದೆ., ನಾವೇನು ಯಾರಿಗೂ ಕಡಿಮೆಯಿಲ್ಲವೆಂಬಂತೆ ಅಂಗವಿಹೀನತೆಯಿದ್ದರೂ ವಿಶೇಷ ಚೇತನ ಮಕ್ಕಳು ವೇದಿಕೆಯನ್ನೇರಿ ಹಾಡಿದರು., ನರ್ತಿಸಿದರು., ಕ್ರೀಡೆಯಲ್ಲಿ ಗೆದ್ದ ಬಹುಮಾನ ಪಡೆದುಕೊಂಡು ಸಂಭ್ರಮಪಟ್ಟರು.’ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಶೇಷ ಮಕ್ಕಳ ಶಾಲೆಗಳು, ವಿಶೇಷ ಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ

(ಮೊದಲ ಪುಟದಿಂದ) ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ವಿಶೇಷ ಚೇತನರ ದಿನಾಚರಣೆಯಲ್ಲಿ ಕಂಡು ಬಂದ ದೃಶ್ಯವಿದು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅತಿಥಿ ಗಣ್ಯರ ಮಾತುಗಳನ್ನು ಸಾವಕಾಶದಿಂದ ಆಲಿಸಿದ ವಿಶೇಷ ಚೇತನರು ಹಾಗೂ ಮಕ್ಕಳು ಕಾರ್ಯಕ್ರಮದ ಕೊನೆಯಲ್ಲಿ ಸಂಭ್ರಮಿಸಿದರು.ಎರಡೂ ಕಾಲುಗಳು ಸ್ವಾಧೀನವಿಲ್ಲದಿದ್ದರೂ ಚೆಟ್ಟಿಮಾನಿಯ ಪ್ರತಿಭೆ ಕೇಕಡ ಚರಣ್ ಕೀಬೋರ್ಡ್‍ನಲ್ಲಿ ವಿಶೇಷ ಚೇತನರನ್ನು ಹುರಿದುಂಬಿಸುವ ‘ಅರಳುವ ಹೂವುಗಳೇ..,’ ಹಾಡನ್ನು ನುಡಿಸಿದಲ್ಲದೆ ‘ ನೀ ಬರೆದ ಕಾದಂಬರಿ’ ಚಿತ್ರದ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದನು. ಚೆಶೈರ್ ಹೋಂನ ಮಕ್ಕಳು ಹಿಂದಿ ಹಾಡಿಗೆ ಹೆಜ್ಜೆ ಹಾಕಿದರೆ; ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಪರ್ಚುನಿಟಿ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನರ್ತಿಸುವ ಮೂಲಕ ಗಮನ ಸೆಳೆದರು. ಹಾಡಿನ ಧ್ವನಿ ಕೇಳಿಸದಿದ್ದರೂ ವೇದಿಕೆಯ ಕೆಳಭಾಗದಲ್ಲಿ ಕುಳಿತಿದ್ದ ಶಾಲೆಯ ಶಿಕ್ಷಕಿ ಮಾಡಿ ತೋರಿಸುತ್ತಿದ್ದ ಹಾವ, ಭಾವವನ್ನು ಗಮನಿಸಿ ನರ್ತಿಸಿ ಗಮನ ಸೆಳೆದರು. ಸ್ವಸ್ಥ ಶಾಲೆಯ ಮಕ್ಕಳು ಕೂಡ ‘ಕನ್ನಡ ನಾಡಿನ ಜೀವನದಿ’ ಹಾಡಿಗೆ ಒಬ್ಬರನ್ನೊಬ್ಬರು ನೋಡಿಕೊಂಡು ಹೆಜ್ಜೆ ಹಾಕಿದರು. ವಿದ್ಯಾರ್ಥಿನಿಯರಿಬ್ಬರು ಹಾಡು ಹೇಳಿದರು.

ಈ ನಡುವೆ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ತಮ್ಮ ಕೊರಳಿಗೆ ಹಾಕಿದ ಬಹುಮಾನದ ಪದಕಗಳನ್ನು ಪದೇ ಪದೇ ನೋಡುತ್ತಾ., ಮುಟ್ಟುತ್ತಾ., ತಮ್ಮನ್ನು ತಯಾರು ಮಾಡಿದ ಶಿಕ್ಷಕರು, ಪೋಷಕರಿಗೆ ತೋರಿಸುತ್ತಾ ಸಂಭ್ರಮಪಟ್ಟರು. ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಛಲದಿಂದ ಯಶಸ್ಸು ಸಾಧ್ಯ

ಛಲದಿಂದ ಯಶಸ್ಸು ಸಾಧ್ಯ. ಇದನ್ನು ಪ್ರತಿಯೊಬ್ಬ ವಿಶೇಷಚೇತನರು ಮನಗಂಡು ಯಶಸ್ಸುಗಳಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷÀ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಹೇಳಿದರು. ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಗಹೀನತೆ ಶಾಪವಲ್ಲ. ಅದನ್ನು ಮೆಟ್ಟಿ ನಿಂತು ವಿಶೇಷಚೇತನರೆಂಬ ಭಾವನೆಯಿಂದ ಹೊರಬಂದು ಸಾಧನೆ ಮಾಡಬೇಕು ಎಂದು ಹೇಳಿದರು.

ಸರ್ಕಾರ ಸಂಘ ಸಂಸ್ಥೆಗಳ ವತಿಯಿಂದ ನೀಡಲಾಗುತ್ತಿರುವ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸುವಂತೆ ಸಲಹೆ ಮಾಡಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ ವಿಶೇಷಚೇತನರು ವಿವಿಧ ಕ್ಷೇತ್ರಗಳಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆ ಮಾಡುತಿದ್ದು, ಬೇರೆಯವರಿಗಿಂತ ಕಮ್ಮಿಯಲ್ಲ ಎಂಬದನ್ನು ಸಾಧಿಸಿ ತೋರಿಸಿದ್ದಾರೆ; ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಜಿಲ್ಲಾಡಳಿತ ಕಚೇರಿ ಭವನದಲ್ಲಿ ಸ್ಥಳಾವಕಾಶ ನೀಡುವಂತೆ ಮನವಿ ಬಂದಿದ್ದು, ಆದ್ಯತೆ ಮೇರೆಗೆ ಬೇರೆ ಕಚೇರಿ ಸ್ಥಳಾಂತರವಾದ ಸಂದರ್ಭದಲ್ಲಿ ಸ್ಥಳಾವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಮಾತನಾಡಿ ವಿಶೇಷಚೇತನರ ಹಕ್ಕುಗಳಿಗೆ ಯಾವದೇ ಚ್ಯುತಿ ಬಾರದಂತೆ ಅವರ ಏಳಿಗೆಗೆ ಮತ್ತು ಸಾಮಥ್ರ್ಯವನ್ನು ಗುರುತಿಸಿ ಅವರನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ಅವರಲ್ಲಿ ಇರುವಂತಹ ತೊಡಕುಗಳನ್ನು ನಿವಾರಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕಾಗಿದೆ; ಹಿಂದೆ ವಿಶೇಷಚೇತನರ ಸ್ಥಿತಿ ತುಂಬಾ ಶೋಚನೀಯವಾಗಿತ್ತು, ಆದರೆ ಈಗ ಎಲ್ಲಾ ರೀತಿಯ ಸೌಲಭ್ಯ ಹಾಗೂ ಸವಲತ್ತುಗಳನ್ನು ಸರ್ಕಾರ ನೀಡುತ್ತಿದ್ದು, ಉತ್ತಮ ಸುಧಾರಣೆ ಕಂಡಿರುತ್ತದೆ. ವಿಶೇಷಚೇತನರು ತಮ್ಮ ಹಕ್ಕುಗಳನ್ನು ತಪ್ಪದೇ ಪಡೆಯಬೇಕು. ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸುವಂತೆ ಹೇಳಿದರು.

ಅಪರ ಜಿಲ್ಲಾಧಿಕಾರಿ ಹಾಗೂ ವಿಶೇಷಚೇತನರ ದಿನಾಚರಣೆ ಸಮಿತಿ ಅಧ್ಯಕ್ಷೆ ಡಾ.ಸ್ನೇಹಾ ಅವರು ಮಾತನಾಡಿ ಪ್ರತಿಯೊಬ್ಬ ವಿಶೇಷಚೇತನರಲ್ಲಿಯೂ ವಿಶೇಷವಾದ ಸಾಮಥ್ರ್ಯ ಇರುತ್ತದೆ. ಅಂತಹ ವಿಶೇಷ ಸಾಮಥ್ರ್ಯವನ್ನು ಪೋಷಕರು ಮತ್ತು ಸಮಾಜವು ಗುರುತಿಸಿ ಅವರ ಯಶಸ್ಸಿಗೆ ಸಹಕಾರಿಯಾಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ಅವರು ಮಾತನಾಡಿ 1992 ರಿಂದ ಅಂತರರಾಷ್ಟ್ರೀಯ ವಿಶ್ವ ವಿಶೇಷಚೇತನರ ದಿನವನ್ನು ಆಚರಿಸುತ್ತಾ ಬಂದಿದ್ದು, ಪ್ರತಿಯೊಬ್ಬ ವಿಶೇಷಚೇತನರಿಗೆ ಘನತೆಯಿಂದ ಬದುಕಲು ಮತ್ತು ಎಲ್ಲಾ ಸವಲತ್ತು, ಸಮಾನ ಅವಕಾಶ ನೀಡಿ ಅವರುಗಳ ಅಭಿವೃದ್ಧಿಗೆ ಸರ್ಕಾರ, ಸಂಘ ಸಂಸ್ಥೆಗಳು ಶ್ರಮಿಸುತ್ತಿರುವದಾಗಿ ತಿಳಿಸಿದರು.

ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಅಧ್ಯಕ್ಷ ಡಾ. ಎಂ.ಆರ್.ಸೀತಾರಾಮ ಮಾತನಾಡಿ ಜಾಗೃತಿ, ಸಂವೇದನೆ ಕೊರತೆಯಿಂದ ಮೇಲು ಕೀಳು ಎಂಬ ಭಾವನೆ ಮೂಡುತ್ತಿದೆ ಇದನ್ನು ತೊಡೆದು ಹಾಕಬೇಕು. ವಿಶೇಷಚೇತನರಿಗೆ ವಿಶೇಷ ಸವಲತ್ತನ್ನು ಸರ್ಕಾರ, ಸಂಘ ಸಂಸ್ಥೆಗಳು ನೀಡುತ್ತಿದ್ದು, ಛಲದಿಂದ ವಿಕಲತೆಯನ್ನು ಮೆಟ್ಟಿ ನಿಂತು ಯಶಸ್ಸು ಗಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷ ಜೆ.ಮಹೇಶ್ವರ್ ಮಾತನಾಡಿ ಕಷ್ಟದಲ್ಲಿ ಇರುವ ವಿಶೇಷಚೇತನರನ್ನು ಕಷ್ಟದ ಜೀವನದಿಂದ ಮುಖ್ಯವಾಹಿನಿಗೆ ತರುವಂತಾಗಬೇಕು. ವಿಶೇಷಚೇತನರಿಗೆ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ಇನ್ನೂ ಹೆಚ್ಚಿನ ಒತ್ತು ನೀಡಬೇಕು ಎಂದರು. ವಿಶೇಷಚೇತನರಿಗೆ ಅವಶ್ಯವಿರುವ ಹಲವು ಬೇಡಿಕೆಗಳನ್ನು ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.

ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ.ಕಾರ್ಯಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಲೋಕೇಶ್, ಇತರರು ಇದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ನಿರೂಪಿಸಿದರು. ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಸಂಪತ್ ಕುಮಾರ್ ಸ್ವಾಗತಿಸಿದರು.