ಸೋಮವಾರಪೇಟೆ, ಡಿ. 2: ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದರೊಂದಿಗೆ ಸಮಾಜದ ಸುಧಾರಣೆಯಲ್ಲಿ ಯುವಕ-ಯುವತಿ ಮಂಡಳಿಗಳು ಸಕ್ರಿಯವಾಗಬೇಕು ಎಂದು ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಕೆ. ಆರ್. ಚಂದ್ರಿಕಾ ಕರೆ ನೀಡಿದರು.

ನೆಹರು ಯುವ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ ಹಾಗೂ ತೋಳೂರುಶೆಟ್ಟಳ್ಳಿಯ ಕಾವೇರಿ ಮಾತಾ ಮಹಿಳಾ ಒಕ್ಕೂಟ-ಯುವತಿ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಸಮೀಪದ ತೋಳೂರು ಶೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುವ ಒಕ್ಕೂಟದಿಂದ ಯುವ ಜನಾಂಗದಲ್ಲಿ ನಾಯಕತ್ವದ ಗುಣಗಳನ್ನು ಮೂಡಿಸಲು ಹಲವಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಇದರೊಂದಿಗೆ ಗ್ರಾಮೀಣ ಕ್ರೀಡೆ, ಕಲೆಗಳನ್ನು ಉಳಿಸಿ ಬೆಳೆಸಲು ಅಗತ್ಯ ವೇದಿಕೆಗಳನ್ನು ಒದಗಿಸಲಾಗುತ್ತಿದ್ದು, ಪ್ರತಿಭೆಗಳು ಇದನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಉಮೇಶ್ ಅವರು, ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದರು. ಯುವ ಒಕ್ಕೂಟದ ಸ್ಥಾಪಕಾಧ್ಯಕ್ಷ ಕೆ.ಸಿ. ಉದಯಕುಮಾರ್ ಮಾತನಾಡಿ, ಬಹುತೇಕ ಕ್ರೀಡೆಗಳು ಇಂದಿನ ಜನ ಮಾನಸದಿಂದ ಅಳಿಸಿ ಹೋಗುತ್ತಿದ್ದು, ಇವುಗಳನ್ನು ಉಳಿಸಿ, ಇಂದಿನ ತಲೆಮಾರಿಗೆ ಪರಿಚಯಿಸುವ ಕಾರ್ಯ ಆಗಬೇಕಿದೆ ಎಂದು ಅಭಿಪ್ರಾಯಿಸಿದರು. ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಮಾತನಾಡಿ, ಕ್ರೀಡೆಗಳು ಪರಸ್ಪರ ಸಾಮರಸ್ಯ ಮೂಡಿಸುವದ ರೊಂದಿಗೆ ಮಾನಸಿಕ ಉಲ್ಲಾಸವನ್ನು ಒದಗಿಸುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿ ಮಾತಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಂಬಿಕಾ ರುದ್ರಪ್ಪ ವಹಿಸಿದ್ದರು. ನಂತರ ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್ ಮತ್ತು ಸಂಗೀತ ಕುರ್ಚಿ, ಶಾಲಾ ಮಕ್ಕಳಿಗೆ ನಿಂಬೆಹಣ್ಣು-ಚಮಚ ಓಟ, 100 ಮೀಟರ್ ಓಟ, ಅಂಗನ ವಾಡಿ ಮಕ್ಕಳಿಗೆ ಕಾಳು ಹೆಕ್ಕುವದು, ಕಪ್ಪೆ ಜಿಗಿತ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.