ಕಣಿವೆ, ಡಿ. 1: ಮನೆಯಲ್ಲಿ ಅಮ್ಮ ಹಚ್ಚುವ ತರಕಾರಿಗಳು ಎಲ್ಲಿಂದ ಬೆಳೆಯುತ್ತವೆ, ಹೇಗೆ ಬೆಳೆಯುತ್ತವೆ ಮತ್ತು ಯಾರು ಬೆಳೆಯುತ್ತಾರೆ. ಹೇಗೆ ಬೆಳೆಸುತ್ತಾರೆ, ನಾವು ತಿನ್ನುವ ಅನ್ನದಲ್ಲಿನ ಅಕ್ಕಿ ಎಲ್ಲಿಂದ ಬೆಳೆಯುತ್ತದೆ. ಹೇಗೆ ಬೆಳೆಯುತ್ತದೆ. ಅದು ಹೇಗಿರುತ್ತದೆ ಎಂಬೆಲ್ಲಾ ಪುಟ್ಟ ಪುಟ್ಟ ಮಕ್ಕಳ ಕುತೂಹಲಕಾರಿ ಪ್ರಶ್ನೆಗಳಿಗೆ ಶಾಲಾ ಶಿಕ್ಷಕರು ಕೃಷಿ ಭೂಮಿಗೆ ಮಕ್ಕಳನ್ನು ಕರೆದೊಯ್ದು ತರಕಾರಿ ಕಾಯಿ ಪಲ್ಯೆಗಳು ಹಾಗೂ ಅನ್ನವಾಗುವ ಭತ್ತದ ಗದ್ದೆಗಳನ್ನು ತೋರಿಸಿ ಭವಿಷ್ಯದ ಪ್ರಜೆಗಳಾದ ಇಂದಿನ ಪುಟ್ಟ ಮಕ್ಕಳಲ್ಲಿ ಅರಿವುಂಟು ಮಾಡಿದ ಪ್ರಸಂಗಕ್ಕೆ ಕುಶಾಲನಗರದ ಮೈಸೂರು ರಸ್ತೆಯಲ್ಲಿರುವ ಶೆಮ್ರಾಕ್ ಎಂಬ ನರ್ಸರಿ ಶಾಲಾ ಮಕ್ಕಳು ಸಾಕ್ಷಿಯಾದರು. ಹಣ್ಣು, ತರಕಾರಿ, ಕಾಯಿ ಪಲ್ಯೆ ಹಾಗೂ ಇತರ ಬೆಳೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಶಾಲಾ ವತಿಯಿಂದ ಕೃಷಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.
ಕಾವೇರಿ ನದಿ ದಂಡೆಯಲ್ಲಿನ ಚಿಕ್ಕಹೊಸೂರು ಗ್ರಾಮದ ಪ್ರಗತಿಪರ ಕೃಷಿಕ ಜಯಣ್ಣ ಎಂಬವರ ಕೃಷಿ ಜಮೀನಿಗೆ ಭೇಟಿ ನೀಡಿದ ಮಕ್ಕಳಿಗೆ ಭೂಮಿಯ ಒಳಗೆ ಬೆಳೆಯುವ ಮೊಟ್ಟೆ ಕೋಸು, ಮೂಲಂಗಿ, ಹೂಕೋಸು, ಬಳ್ಳಿಗಳ ಮೇಲೆ ಬೆಳೆಯುವ ಬೀನ್ಸ್, ಹಲಸಂದೆ, ಹೀರೆ ಕಾಯಿ, ಕುಂಬಳಕಾಯಿ, ಗಿಡದ ಮೇಲಿನ ಗೊನೆಗಳ ತುಂಬಾ ಬೆಳೆದ ಭತ್ತದ ಬೆಳೆ ಸೇರಿದಂತೆ ಇನ್ನು ಹಲವು ಕುತೂಹಲಕಾರಿ ಅಂಶಗಳ ಬಗ್ಗೆ ಕೃಷಿಕ ಜಯಣ್ಣ ಹಾಗೂ ಶಶಿಕಲಾ ದಂಪತಿಗಳು ಮಾಹಿತಿ ನೀಡಿದರು.
ತಾವು ಬೆಳೆದ ತಾಜಾ ತರಕಾರಿ ತಿನಿಸುಗಳನ್ನು ಮಕ್ಕಳಿಗೆ ತಿನ್ನಿಸಿ ಸಂಭ್ರಮಿಸಿದರು. ಮನೆಯಲ್ಲಿನ ಅಮ್ಮನ ಕೈ ತುತ್ತು ಬಿಟ್ಟರೆ ಬೇರೆನನ್ನು ತಿನ್ನದಿದ್ದ ಮಕ್ಕಳು ಕೃಷಿಕ ದಂಪತಿಗಳು ಬೆಳೆದ ತರಕಾರಿ ಹಣ್ಣುಗಳನ್ನು ಜಮೀನಿನಲ್ಲಿ ತಿಂದು ಸಂತಸಪಟ್ಟರು. ಶಾಲಾ ಮಕ್ಕಳ ಸಂಯೋಜಕಿ ಟ್ರಿಸ್ಸಾ ಶೈಜಾ, ಶಿಕ್ಷಕಿಯರಾದ ಶಾಂತಿ ಹಾಗೂ ಹಸೀನಾ ಇದ್ದರು. ಶಿವಮೊಗ್ಗದ ಉಲ್ಲಾಸ್ ಎಂಬವರು ಕಳೆದ ಎರಡು ವರ್ಷಗಳಿಂದ ಕುಶಾಲನಗರದ ವೆಂಕಟೇಶ್ವರ ಚಿತ್ರಮಂದಿರದ ಹಿಂಬದಿಯ ಖಾಸಗಿ ಕಟ್ಟಡದಲ್ಲಿ ನರ್ಸರಿ ಶಾಲೆ ತೆರೆದಿದ್ದಾರೆ.