ಕೂಡಿಗೆ, ಡಿ. 1: ಅಕಾಲಿಕ ಮಳೆಯಿಂದಾಗಿ ಕುಶಾಲನಗರ ಹೋಬಳಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಇಲ್ಲಿನ ರೈತರು ಹಾರಂಗಿ ನೀರನ್ನು ಅವಲಂಬಿತವಾಗಿ ಭತ್ತದ ಬೆಳೆಯನ್ನು ಬೆಳೆದಿದ್ದು, ಹಾರಂಗಿ ಅಚ್ಚುಕಟ್ಟು ಪ್ರದೇಶವಾದ ಹುದಗೂರು, ಹೆಬ್ಬಾಲೆ, ಮದಲಾಪುರ, ಶಿರಂಗಾಲ, ತೊರೆನೂರು ವ್ಯಾಪ್ತಿಗಳು ಸೇರಿದಂತೆ ಪಕ್ಕದ ಜಿಲ್ಲೆಯ ಅರಕಲಗೂಡು ತಾಲೂಕು ಮತ್ತು ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಸಾವಿರಾರು ಹೆಕ್ಟೇರ್ ಜಾಗದಲ್ಲಿ ಭತ್ತವನ್ನು ಬೆಳೆಸಲಾಗಿದೆ. ಕಳೆದ ಮೂರು ತಿಂಗಳಿನಿಂದ ಭತ್ತದ ಬೆಳೆಯು ಒಂದಲ್ಲಾ ಒಂದು ಸಮಸ್ಯೆಗಳ ನಡುವೆ ಇದೀಗ ಕಟಾವಿಗೆ ಬಂದು ನಿಂತಿದೆ. ಕುಶಾಲನಗರ ಹೋಬಳಿ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಭತ್ತದ ಬೆಳೆಗಳನ್ನು ಕೊಯ್ಲು ಮಾಡಲಾಗಿದೆ.

ಕಳೆದೆರಡು ದಿನಗಳಿಂದ ಮೋಡಕವಿದ ವಾತಾವರಣ ಹಾಗೂ ಇಬ್ಬನಿ ಮಿಶ್ರಿತ ಮಳೆ ಬೀಳುತ್ತಿರುವದರಿಂದ ಭತ್ತ ಗದ್ದೆಯಲ್ಲೇ ಉದುರಲು ಪ್ರಾರಂಭವಾಗಿದೆ. ಅಲ್ಲದೇ ಹುಲ್ಲು ಮಳೆಯ ನೀರಿನಿಂದಾಗಿ ಕರಗಲಾರಂಭಿಸಿದೆ.

ಈ ಪ್ರದೇಶಗಳಲ್ಲಿ ನೀರಾವರಿ ಇಲಾಖೆಯ ಸೂಚನೆ ಮೇರೆಗೆ ಹಾಗೂ ಕೃಷಿ ಇಲಾಖೆಯ ಮಣ್ಣು ಆಧಾರಿತಾನುಗುಣವಾಗಿ ಮೂರು ತಿಂಗಳ ಬೆಳೆಗಳಾದ 64 ಐಆರ್ 20 ಹಾಗೂ ಸೋನಾ ಮಾದರಿಯ ಹೈಬ್ರೀಡ್ ತಳಿಗಳನ್ನು ಬೆಳೆಯಲಾಗಿದೆ. ರೈತರು ಇನ್ನೇನು ಭತ್ತದ ಬೆಳೆಯನ್ನು ಕೊಯ್ಲು ಮಾಡಿ ಮನೆಗೆ ಧಾನ್ಯ ಲಕ್ಷ್ಮಿಯನ್ನು ಮನೆಗೆ ತರುವಷ್ಟರಲ್ಲಿ ಮಳೆ ಬಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. - ಕೆ.ಕೆ. ನಾಗರಾಜಶೆಟ್ಟಿ