ಮಡಿಕೇರಿ, ಡಿ. 1: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ; ಅರಣ್ಯದ ನಡುವೆ ಹಾಡಿಗಳಲ್ಲಿ ಬದುಕುತ್ತಿರುವ ಆದಿವಾಸಿಗಳಿಗೆ; ಮುಂಗಾರು ಪ್ರಾರಂಭದ ಜೂನ್ ಮಾಸದಿಂದ ಪ್ರಸಕ್ತ ನವೆಂಬರ್ ತನಕ ಒದಗಿಸಬೇಕಿರುವ ಉಚಿತ ಪೌಷ್ಟಿಕ ಆಹಾರ ಇನ್ನು ಪೂರೈಕೆಯಾಗದಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು; ಸರಕಾರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ.ಒಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ರೂಪುಗೊಂಡಿರುವ ಅನೇಕ ಯೋಜನೆಗಳಂತೆ ಈ ಪೌಷ್ಟಿಕ ಆಹಾರ ಯೋಜನೆಯೂ ಅರ್ಹ ಫಲಾನುಭವಿಗಳಿಗೆ ತಲಪದಿರುವ ಕುರಿತು; ಆದಿವಾಸಿ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಶಕ್ತಿ’ಗೆ ಲಭಿಸಿರುವ ಮಾಹಿತಿಯಂತೆ; ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು, ಶಿಶುಗಳ ಸಹಿತ ಯಾರೊಬ್ಬರೂ ಪೌಷ್ಟಿಕ ಆಹಾರ ಕ್ರಮದಿಂದ ವಂಚಿತರಾಗಬಾರದು ಎಂದು ಸರಕಾರವು; ಮಾತೃಪೂರ್ಣ, ಮಾತೃವಂದನ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದೆ. ಬಹುತೇಕ ಇಂತಹ ಯೋಜನೆಗಳನ್ನು ಅಂಗನವಾಡಿಗಳ ಮುಖಾಂತರ ಅನುಷ್ಠಾನಗೊಳಿಸಿ; ನಿತ್ಯ ಪೌಷ್ಟಿಕ ಆಹಾರ ತಯಾರಿಸಿ ಉಣಬಡಿಸಲು ಸೂಚಿಸಿದೆ.

ಇನ್ನು ಶಾಲಾ ಹಂತದ ವಂಚಿತ ಕಿಶೋರಿಯರಿಗೂ ಈ ಯೋಜನೆಗಳನ್ನು ಮನೆಗಳಿಗೆ ತಲಪಿಸಲು ಸರಕಾರ ಆದೇಶಿಸಿದೆ. ಅದೇ ರೀತಿ ಕಾಡು - ಮೇಡುಗಳ ಅಂಚಿನ ಹಾಡಿಗಳ ಆದಿವಾಸಿಗಳಿಗೂ ಇಂತಹ ಪೌಷ್ಟಿಕ ಆಹಾರ ಕೊರತೆ ನೀಗಿಸಲು; ಪ್ರತಿ 45 ದಿನಗಳ ಅವಧಿಗೆ ಆರು ಬಾರಿ ಪೌಷ್ಟಿಕ ಆಹಾರವನ್ನು ಹಾಡಿ ಮಂದಿಯ ಮನೆ ಬಾಗಿಲಿಗೆ ಒದಗಿಸಲು ಸೂಚಿಸಲಾಗಿದೆ.ಆಹಾರ ಪಟ್ಟಿ : ಈ ರೀತಿಯಾಗಿ ಉತ್ತಮ ಗುಣಮಟ್ಟದ ಅಕ್ಕಿ, ತೊಗರಿಬೇಳೆ, ಕಡ್ಲೆಕಾಳು, ಹುರುಳಿ, ಹೆಸರುಕಾಳು, ಹಲಸಂಡೆ ಕಾಳು, ತುಪ್ಪ, ಎಣ್ಣೆ, ಸಕ್ಕರೆ, ಬೆಲ್ಲ ಸೇರಿದಂತೆ ಕೋಳಿಮೊಟ್ಟೆ ಪೂರೈಸಲು ಸಂಬಂಧಿಸಿದ ಇಲಾಖೆಗಳಿಗೆ ಸ್ಪಷ್ಟ ಆದೇಶವಿದೆ.

ತಪ್ಪು ಮಾಹಿತಿ : ಅನೇಕ ವರ್ಷಗಳಿಂದ ಸರಕಾರ ಕಲ್ಪಿಸಿರುವ ಈ ಸೌಲಭ್ಯಗಳನ್ನು ಹಾಡಿ ಮಂದಿಗೆ ಕಲ್ಪಿಸುವ ಬದಲಿಗೆ ಅಧಿಕಾರಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ; ಪೌಷ್ಟಿಕ ಆಹಾರ ಪ್ರಮಾಣ ಕಡಿತಗೊಳಿಸಿದ್ದಾರೆ ಎಂದು ಗಿರಿಜನ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.

ಪ್ರಮಾಣ ಕಡಿತ : ಈ ಪ್ರಕಾರ ಪ್ರತಿಯೊಬ್ಬ ಆದಿವಾಸಿ ಕುಟುಂಬಕ್ಕೆ ಪೂರೈಸಬೇಕಿದ್ದ ಮಾಸಿಕ ಪಡಿತರ ಪ್ರಕಾರ; 45 ಮೊಟ್ಟೆ, ಎರಡು ಕೆ.ಜಿ. ತುಪ್ಪ, 2 ಲೀ. ಎಣ್ಣೆ, 15 ಕೆ.ಜಿ. ಅಕ್ಕಿ, 5 ಕೆ.ಜಿ. ತೊಗರಿಬೇಳೆ, 3 ಕೆ.ಜಿ. ಕಡ್ಲೆಬೇಳೆ, 2 ಕೆ.ಜಿ. ಹುರುಳಿ, 1 ಕೆ.ಜಿ. ಹೆಸರುಕಾಳು, 4 ಕೆ.ಜಿ. ಸಕ್ಕರೆ ಇತ್ಯಾದಿಯ ಪ್ರಮಾಣವನ್ನು ಕಡಿತಗೊಳಿಸಲಾಗಿದೆ.

ಈ ಬಗ್ಗೆ ಇಲಾಖೆಯ ಮಂದಿಯ ಪ್ರಕಾರ ಸರಕಾರದ ಆದೇಶದಂತೆ ಪ್ರಸ್ತುತ ಅವಧಿಯಲ್ಲಿ 8 ಕೆ.ಜಿ. ಅಕ್ಕಿ, 3 ಕೆ.ಜಿ. ತೊಗರಿ,

(ಮೊದಲ ಪುಟದಿಂದ) 1 ಕೆ.ಜಿ. ಕಡ್ಲೆ, 1 ಕೆ.ಜಿ. ಹುರುಳಿ, 1 ಕೆ.ಜಿ. ಹೆಸರು ಕಾಳು, 1 ಕೆ.ಜಿ. ಹಲಸಂದೆ ಕಾಳು, 1 ಕೆ.ಜಿ. ಸಕ್ಕರೆ, 1 ಕೆ.ಜಿ. ಬೆಲ್ಲ, 30 ಕೋಳಿ ಮೊಟ್ಟೆ, 2 ಕೆ.ಜಿ. ಎಣ್ಣೆ, 1/2 ಕೆ.ಜಿ. ತುಪ್ಪ, ಹಂಚಿಕೆಗೆ ನಿರ್ದೇಶನ ಲಭಿಸಿದೆಯಂತೆ.

ಟೆಂಡರ್ ವಿಳಂಬ : ಈಗಿನ ನಿಯಮದಂತೆ ‘ಆನ್‍ಲೈನ್’ ಟೆಂಡರ್ ಪ್ರಕ್ರಿಯೆ ವಿಳಂಬದಿಂದಾಗಿ; ಕಳೆದ ಜುಲೈ ತಿಂಗಳಿನಲ್ಲಿ ಸರಕಾರದ ಹೊಸ ತಿದ್ದುಪಡಿ ಆದೇಶ ಹೊರಬಿದ್ದಿದೆ; ಈ ಕಾರಣ ‘ಆನ್‍ಲೈನ್’ ಪ್ರಕ್ರಿಯೆ ಮುಗಿಸಲು ಕಾಲಾವಕಾಶದೊಂದಿಗೆ ತಾ. 8.11.2019ರಂದು ಅಧಿಕೃತ ಟೆಂಡರ್ ಪ್ರಕಟಗೊಂಡಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಹೀಗಾಗಿ ಮಳೆಗಾಲದ ಪೌಷ್ಟಿಕ ಆಹಾರ ಪೂರೈಕೆಯನ್ನು ಈ ತಿಂಗಳಿನಿಂದ ಆದಿವಾಸಿಗಳಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುವದು ಎಂದು ಸಮಜಾಯಿಷಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಮುಗ್ಧ ಜನತೆಯ ಬಾಳಿಗೆ ಆಸರೆ ನೀಡುತ್ತಿರುವ ಸರಕಾರಿ ಯೋಜನೆಗಳು; ಕಾರ್ಯಾಂಗದ ಲೋಪದಿಂದ ಪದೇ ಪದೇ ಕೈ ತಪ್ಪುತ್ತಿರುವದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ. -ಶ್ರೀಸುತ