ಕುಶಾಲನಗರ, ಡಿ 02: ಡಿಸೆಂಬರ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಮೈಸೂರು-ಕೊಡಗು ಗಡಿಭಾಗದ ಕುಶಾಲನಗರದಲ್ಲಿ ಕಾವೇರಿ ಸೇತುವೆ ಉದ್ದಕ್ಕೂ ರಂಗುರಂಗಿನ ಪ್ಲಾಸ್ಟಿಕ್ ಚೆಂಬುಗಳನ್ನು ಹಿಡಿದು ತೆರಳುತ್ತಿರುವ ಶಿಕ್ಷಕರು, ವಿದ್ಯಾರ್ಥಿಗಳ ಬಹಿರಂಗ ದರ್ಶನ ಸಾಮಾನ್ಯವಾಗುತ್ತಿದೆ. ಒಂದೆಡೆ ನದಿ ಹಬ್ಬದ ಹೆಸರಿನಲ್ಲಿ ಜೀವನದಿ ಕಾವೇರಿಯ ಸ್ವಚ್ಛತೆ ಬಗ್ಗೆ ಆಂದೋಲನ ನಡೆಯುತ್ತಿದ್ದರೆ ಇನ್ನೊಂದೆಡೆ ಬೆಳ್ಳಂಬೆಳಗ್ಗೆ ಮಕ್ಕಳು ನದಿ ಪೊದೆಯಡಿಯಲ್ಲಿ ಚೆಂಬು ಹಿಡಿದುಕೊಂಡು ಓಡಾಡುತ್ತಿರುವ ದೃಶ್ಯ ಹೆದ್ದಾರಿಯಲ್ಲಿ ತೆರಳುತ್ತಿರುವ ದೃಶ್ಯ ಸ್ಥಳೀಯರಲ್ಲಿ ಅಸಹನೆ ಉಂಟುಮಾಡುತ್ತಿದೆ.ಶಿಕ್ಷಣ ಇಲಾಖೆ ಸರಕಾರಿ ಶಾಲೆಯ ಮಕ್ಕಳಿಗೆ ಕರ್ನಾಟಕ ದರ್ಶನ ಎಂಬ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು ರಾಜ್ಯದ ವಿವಿಧ ಸರಕಾರಿ ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳು ನಾಡಿನ ಪ್ರವಾಸಿ ಕೇಂದ್ರಗಳಿಗೆ ತೆರಳುವ ಯೋಜನೆಯ ನಡುವೆ ಕಂಡುಬಂದ ನಿಗೂಢ ಸಮಸ್ಯೆ ಇದಾಗಿದೆ. ಯಾವದೇ ಮೂಲಭೂತ ವ್ಯವಸ್ಥೆ ಕಲ್ಪಿಸಲು ಶಿಕ್ಷಣ ಇಲಾಖೆ ವಿಫಲವಾಗಿದೆ ಎಂದರೆ ತಪ್ಪಾಗಲಾರದು.

(ಮೊದಲ ಪುಟದಿಂದ) ರಸ್ತೆ ಬದಿಯಲ್ಲಿರುವ ದೇವಾಲಯ, ಸಮುದಾಯ ಭವನ, ಕೆರೆ ಕಟ್ಟೆ, ನದಿಗಳೇ ಇವರ ವಾಸಸ್ಥಾನ. ನದಿ, ಜಲಮೂಲಗಳು ಕಂಡಲ್ಲಿ ಅಡುಗೆ ಮಾಡುವ ವ್ಯವಸ್ಥೆ, ಸ್ವಚ್ಛತೆಯ ಪಾಠ ಮಾಡುವ ಶಿಕ್ಷಕರ ಎದುರಿನಲ್ಲಿಯೇ ಚೆಂಬು ಹಿಡಿದುಕೊಂಡು ಬಯಲು ಶೌಚ ಮಾಡುವ ಈ ಪ್ರವಾಸ ಶಿಕ್ಷಣ ಇಲಾಖೆಯ ಒಂದು ಯೋಜನೆಯಾಗಿ ಮುಂದುವರೆಯುತ್ತಿರುವದು ನಿಜಕ್ಕೂ ನಗೆಪಾಟಲಿಗೀಡಾದ ವಿಷಯವಾಗಿದೆ.

ಕೊಡಗಿಗೆ ಆಗಮನ ಆಗುವಷ್ಟರಲ್ಲಿಯೇ ಗಡಿ ಭಾಗದಲ್ಲಿ ಕಣ್ಣಿಗೆ ಕಾಣುವ ಕಾವೇರಿ ನದಿ ತಟ ಈ ಮಕ್ಕಳಿಗೆ ಶೌಚಾಲಯವಾಗಿ ಬಳಕೆಯಾಗುತ್ತಿರುವದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಸೇತುವೆಯ ಎರಡೂ ಭಾಗಗಳಲ್ಲಿ ಮಕ್ಕಳು, ಶಿಕ್ಷಕರು ಬೇಧವಿಲ್ಲದೆ ನದಿ ತಟದಲ್ಲಿ ಬಯಲು ಶೌಚಕ್ಕೆ ಹೋಗುವದು, ಬಾಯಲ್ಲೊಂದು ಬ್ರಷ್, ಕೈಯಲ್ಲೊಂದು ಚೆಂಬು ಇದು ನೋಡುಗರಿಗೆ ಅಸಹನೀಯ ಬೆಳವಣಿಗೆಯಾದರೆ ಇಡೀ ಕಾವೇರಿ ನದಿ ತಟ ಬಿಸಿಲು ಬೀಳುತ್ತಲೇ ವಾಸನಾಮಯವಾಗಿ ಪರಿವರ್ತನೆಗೊಳ್ಳುತ್ತದೆ. ಇದರೊಂದಿಗೆ ಅಪಾಯಕಾರಿ ನದಿಯಲ್ಲಿ ಮಕ್ಕಳು ಸ್ನಾನ, ಈಜಾಟ ಕೂಡ ಮಾಡುತ್ತಾರೆ. ಈ ಸಂದರ್ಭ ಮಕ್ಕಳ ರಕ್ಷಣೆಯ ಕೊರತೆ ಎದ್ದು ಕಾಣುವದರೊಂದಿಗೆ ಅಪಾಯಕ್ಕೆ ಆಹ್ವಾನ ಉಂಟಾಗುವ ಸಾಧ್ಯತೆ ಕೂಡ ಎದುರಾಗಬಹುದು.

ಈ ಬಗ್ಗೆ ಉತ್ತರ ಕರ್ನಾಟಕ ಜಿಲ್ಲೆಯೊಂದರ ಸರಕಾರಿ ಶಾಲೆಯ ಶಿಕ್ಷಕರಲ್ಲಿ ವಿಚಾರಿಸಿದಾಗ ಅವರು ಹೇಳುವದಿಷ್ಟು. ಬಸ್‍ನಲ್ಲಿ ಒಟ್ಟು 55 ರಿಂದ 60 ವಿದ್ಯಾರ್ಥಿಗಳು ಪ್ರವಾಸಕ್ಕೆ ಬರುತ್ತಾರೆ. ಪ್ರವಾಸ ಸಂದರ್ಭ ಆದಷ್ಟು ವ್ಯವಸ್ಥೆ ಕಲ್ಪಿಸುತ್ತಿದ್ದೇವೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕೆಲವೆಡೆ ನಮಗೆ ಉಳಿದುಕೊಳ್ಳಲು ವ್ಯವಸ್ಥೆ ಇರುವದಿಲ್ಲ. ಈ ಸಂದರ್ಭ ನದಿ, ಕೆರೆ ಕಟ್ಟೆಗಳೇ ಆಶ್ರಯ ತಾಣವಾಗುತ್ತವೆ ಎಂಬದು ಮಕ್ಕಳ ಅಳಲು.

ಕುಶಾಲನಗರ ಪಟ್ಟಣ ಪಂಚಾಯ್ತಿ ಪ್ರಕಟಣೆಯಂತೆ ಪಟ್ಟಣ ಬಯಲು ಶೌಚ ಮುಕ್ತ ಪಟ್ಟಣವೆಂದು ಘೋಷಣೆಯಾಗಿದ್ದರೂ, ಕರ್ನಾಟಕ ದರ್ಶನ ಮಾಡುವ ನಡುವೆ ಪ್ರವಾಸಕ್ಕೆ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಕ, ಶಿಕ್ಷಕಿಯರು ತಮ್ಮ ದೇಹಬಾಧೆ ತೀರಿಸಿಕೊಳ್ಳಲು ನದಿ ತಟಕ್ಕೆ ತೆರಳಿ ಜೀವನದಿ ಕಾವೇರಿಯನ್ನು ಮಲಿನಗೊಳಿಸುವದು ನಿಜಕ್ಕೂ ಖಂಡನಾರ್ಹ. ಈ ಬಗ್ಗೆ ರಾಜ್ಯದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರಿಗೂ `ಶಕ್ತಿ' ಮೂಲಕ ಸಚಿತ್ರ ಮಾಹಿತಿ ಒದಗಿಸಲಾಗಿದ್ದು ಮಕ್ಕಳ ರಕ್ಷಣೆಯೊಂದಿಗೆ ಬಯಲು ಶೌಚ ಮೂಲಕ ಆಗುತ್ತಿರುವ ಜಲಮೂಲಗಳ, ಪರಿಸರ ಕಲುಷಿಕೆ ತಪ್ಪಿಸಲು ಶಿಕ್ಷಣ ಇಲಾಖೆಗೆ ಆದೇಶ ನೀಡುವಂತೆ ಮನವಿ ಮಾಡಲಾಗಿದೆ. ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಈ ಬಗ್ಗೆ ಕೂಡಲೆ ಗಮನಹರಿಸಬೇಕಾಗಿದೆ ಎನ್ನುವದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಹಾಗೂ ಸ್ಥಳೀಯರ ಆಗ್ರಹವಾಗಿದೆ.