ಶನಿವಾರಸಂತೆ, ಡಿ. 2: ಕರ್ನಾಟಕ ರಕ್ಷಣಾ ವೇದಿಕೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಶಿಬಿರದ ಆಶ್ರಯದಲ್ಲಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯಿತು. ಶನಿವಾರಸಂತೆ ಅಕ್ಕಪಕ್ಕದ ಗ್ರಾಮಗಳಿಂದ ಆಗಮಿಸಿದ 500ಕ್ಕೂ ಅಧಿಕ ಜನರು ಶಿಬಿರದ ಸೇವೆಯನ್ನು ಪಡೆದುಕೊಂಡರು.
ಕಾರ್ಯಕ್ರಮವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಯಜ್ಞ ವೈದ್ಯೆ ಡಾ.
ಕಾವ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಕ್ಷಣಾ ವೇದಿಕೆಯ ತಾಲೂಕು ಕಾರ್ಯದರ್ಶಿ ಪ್ರವೀಣ್ ವಹಿಸಿದ್ದರು. ನೇತ್ರ ವೈದ್ಯರಾದ ಪುಟ್ಟ ರುದ್ರಯ್ಯ ಮಾತನಾಡುತ್ತಾ, ಕಣ್ಣುಗಳನ್ನು ಕಾಪಾಡುವ ಬಗ್ಗೆ ತಿಳಿಸಿದರು. ಜಿ.ಪಂ. ಸದಸ್ಯೆ ಸರೋಜಮ್ಮ ಮಾತನಾಡಿ, ಕರವೆ ಕಾರ್ಯಕರ್ತರಿಂದ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸುತ್ತಿರುವದು ಉತ್ತಮ ಕೆಲಸವೆಂದರು. ಗೌಡಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂದರ್ ಮಾತನಾಡಿದರು.
ಶಿಬಿರದಲ್ಲಿ ಡಾ. ಪುಟ್ಟ ರುದ್ರಯ್ಯ, ಡಾ. ಗೀತಾ, ಡಾ. ಕಾವ್ಯ ನೇತೃತ್ವದಲ್ಲಿ ಸಂಸ್ಥೆಯ 5 ಮಂದಿ ತಜ್ಞ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ವೈದ್ಯಾಧಿಕಾರಿ ಡಾ. ಇಂದೂದರ್, ಹಿರಿಯ ಪತ್ರಕರ್ತ ನರೇಶ್ಚಂದ್ರ, ಮುಳ್ಳೂರು ಪ್ರಶಸ್ತಿ ವಿಜೇತ ಶಿಕ್ಷಕ ಸತೀಶ್, ಗುತ್ತಿಗೆದಾರ ಅಬ್ದುಲ್, ಕರವೇ ಹೋಬಳಿ ಅಧ್ಯಕ್ಷ ಆನಂದ ಮೊದಲಾದವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ತಾಲೂಕು ಕರವೇ ಅಧ್ಯಕ್ಷ ಫ್ರ್ರಾನ್ಸಿಸ್ ಡಿಸೋಜಾ, ಜಿ. ಅಧ್ಯಕ್ಷ ಜಗದೀಶ್, ವೀರಾಜಪೇಟೆ ಅಧ್ಯಕ್ಷ ಅನಿಲ್, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.