ಕುಶಾಲನಗರ, ಡಿ. 2: ಸಾಧುಗಳ ವೇಷ ಧರಿಸಿ ಜನರಿಗೆ ವಂಚನೆ ಮಾಡುತ್ತಿದ್ದ ನಾಲ್ವರು ಅಂತರ್ ರಾಜ್ಯ ವಂಚಕರನ್ನು ಕುಶಾಲನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ. 24 ರಂದು ಕುಶಾಲನಗರದ ಐಬಿ ರಸ್ತೆಯ ಹಣಕಾಸು ಸಂಸ್ಥೆಗೆ ನುಗ್ಗಿ ಮಾಲೀಕ ಬಿ.ಎ. ನಾಗೇಗೌಡ ಎಂಬವರಿಗೆ ಮತ್ತು ಬರುವ ಔಷಧಿ ಸಿಂಪಡಿಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾದ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ .ಡಿ.ಪಿ. ಸುಮನ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ಡಿವೈಎಸ್ಪಿ ಪಿ.ಕೆ. ಮುರಳೀಧರ್ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ರಾಜಸ್ತಾನ ಮೂಲದ ವ್ಯಕ್ತಿಗಳಾದ ನಾಗನಾಥ್, ಮಜೂರ್ ನಾಥ್, ಸುರಬ್ ನಾಥ್ ಮತ್ತು ಉಮೇಶ್ ನಾಥ್ ಎಂಬವರು ಬಂಧಿತ ಆರೋಪಿಗಳು ಇವರೊಂದಿಗೆ ಅವರು ರಾಜಸ್ತಾನದಿಂದ ತಂದಿದ್ದ ಬಾಡಿಗೆ ಕಾರು (ಖಎ.38. ಅಂ.2346) ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಳಿಯಿದ್ದ ಮೊಬೈಲ್, ನಗದು ಮತ್ತು ರಾಸಾಯನಿಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶ್ರವಣಬೆಳಗೊಳ ಕಡೆ ತೆರಳಿದ್ದ ಸಾಧುಗಳ ವೇಷಧಾರಿಗಳು ಕುಶಾಲನಗರ ಕಡೆಯಿಂದ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಸಂಶಯದಿಂದ ವಿಚಾರಣೆಗೆ ಒಳಪಡಿಸಿದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಕುಶಾಲನಗರ ವೃತ್ತನಿರೀಕ್ಷಕ ಕುಮಾರ್ ಆರಾಧ್ಯ, ಠಾಣಾಧಿಕಾರಿ ಎಚ್.ವೈ. ವೆಂಕಟರಮಣ ಮತ್ತು ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಪತ್ತೆಯಾಗಿರುವದಾಗಿ ತಿಳಿದುಬಂದಿದೆ
ವಂಚಕರು ಉದ್ಯಮಿಗಳ ಕಚೇರಿಗೆ ನುಗ್ಗಿ ಮತ್ತು ಬರಿಸುವ ವಸ್ತುಗಳನ್ನು ನೀಡಿ ಬೆಳೆ ಬಾಳುವ ವಸ್ತು, ಹಣವನ್ನು ದೋಚುವ ಹವ್ಯಾಸ ಹೊಂದಿದ್ದು, ಒಂದೇ ಕುಟುಂಬದ ಸದಸ್ಯರು ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಎ.ಎಸ್.ಐ. ಗೋಪಾಲ್, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಸಜಿ, ಸುಧೀಶ್, ಸುರೇಶ್ ಮತ್ತಿತರರು ಪಾಲ್ಗೊಡಿದ್ದರು.