ಮಡಿಕೇರಿ, ಡಿ. 1: ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ನಗರದ ಬಾಲಭವನ ಸಭಾಂಗಣದಲ್ಲಿ ಸ್ವತಂತ್ರ ಭಾರತದಲ್ಲಿ ಬಹುಜನರು ಅವಲಂಬಿತರು ಏಕೆ? ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಪ್ರಜಾಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಬಿ. ಗೋಪಾಲ್ ಮಾತನಾಡಿ, ಬಡಜನರು, ಹಿಂದುಳಿದ ವರ್ಗದವರು, ದಲಿತರು, ಕೂಲಿ ಕಾರ್ಮಿಕರು ತಮ್ಮ ಜೀವನದಲ್ಲಿ ಏಳಿಗೆಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಕೂಲಿ ಕಾರ್ಮಿಕರ ಜೀವನ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಸ್ತ್ರವಾಗಿರುವ ಮತವನ್ನು ತಾಯಿಯಂತೆ ಕಾಪಾಡಬೇಕು ಎನ್ನುವ ಮಾತಿದೆ. ಆದರೆ ಇಂದು ಹಣ ಮತ್ತು ಮದ್ಯಕ್ಕಾಗಿ ಮತಗಳು ಮಾರಾಟವಾಗುತ್ತಿವೆ ಎಂದು ವಿಷಾದಿಸಿದರು.
ಮೈಸೂರಿನ ಮಹಾರಾಜ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿ.ಷಣ್ಮುಗಂ ಮಾತನಾಡಿ, ಬಹುಜನರು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು, ಶೋಷಣೆಗೆ ಒಳಗಾಗುತ್ತಲೇ ಬರುತ್ತಿದ್ದಾರೆ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಕನಿಷ್ಠ ಅಗತ್ಯತೆಗಳು ಬೇಕು. ಆದರೆ ಅದನ್ನೇ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ನಿರಾಕರಣೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್.ಮುತ್ತಪ್ಪ ಮಾತನಾಡಿ ಸಂವಿಧಾನ ನೀಡಿರುವ ಹಕ್ಕುಗಳನ್ನು ನ್ಯಾಯಯುತವಾಗಿ ಪಡೆಯಲು ಎಲ್ಲಾ ಬಡವರ್ಗ ಮತ್ತು ಕಾರ್ಮಿಕರು ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಗಣೇಶ್, ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ, ಸಹ ಕಾರ್ಯದರ್ಶಿ ಸತೀಶ್ ತಲ್ತರೆ, ಶಿವಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.