ಮಡಿಕೇರಿ, ಡಿ. 2: ವೀರಾಜಪೇಟೆ ತಾಲೂಕಿನ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ರೇಷ್ಮೆಹಡ್ಲುವಿನಲ್ಲಿ ಸೋಮವಾರ ತೀವ್ರ ಮಿಷನ್ ಇಂದ್ರಧನುಷ್ 2.0 ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಹುಟ್ಟಿದಾಗಿನಿಂದ 2 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರು ಸಂಪೂರ್ಣ ಲಸಿಕೆ ಪಡೆಯಬೇಕು. ಒಬ್ಬರೂ ಲಸಿಕೆಯಿಂದ ವಂಚಿತರಾಗ ಬಾರದು. ರೋಗ ನಿರೋಧಕ ಲಸಿಕೆ ನೀಡುವದರಿಂದ ಶಿಶು/ಮಕ್ಕಳನ್ನು ಮಾರಕ ರೋಗಗಳಾದ ಪೋಲಿಯೋ, ಹೆಪಟೈಟಿಸ್-ಬಿ, ಬಾಲಕ್ಷಯ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ನ್ಯುಮೋನಿಯಾ (ಹಿಬ್), ದಡಾರ, ರುಬೆಲ್ಲಾ, ಮೆದುಳುಜ್ವರ (ಹಿಬ್ ಮತ್ತು ಜಪನೀಸ್ ಎನ್‍ಸಿಫಿಲೈಟೀಸ್) ಗಳಿಂದ ರಕ್ಷಿಸಬಹುದಾಗಿದೆ. ಆ ನಿಟ್ಟಿನಲ್ಲಿ ಡಿಸೆಂಬರ್-2019ರಿಂದ ಮಾರ್ಚ್-2020ರ ವರೆಗೆ ಪ್ರತಿ ತಿಂಗಳ 7 ದಿನಗಳು ಈ ಕಾರ್ಯಕ್ರಮ ನಿಗದಿಯಾಗಿದೆ ಎಂದರು.
ಮಡಿಕೇರಿ ಮತ್ತು ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ‘ಪೌಷ್ಟಿಕ ಪುನರ್ವಸತಿ ಕೇಂದ್ರ’ಕ್ಕೆ ಕಡಿಮೆ ತೂಕ ಇರುವ ಮಕ್ಕಳನ್ನು ಕರೆದುಕೊಂಡು ಬಂದು ಚಿಕಿತ್ಸೆ ಪಡೆಯಲು ತಿಳಿಸಿದರು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಎಸ್. ಗೋಪಿನಾಥ್, ಮಾತನಾಡಿ, ಅಲೆಮಾರಿ ಜನಾಂಗ, ಇಟ್ಟಿಗೆ ಫ್ಯಾಕ್ಟರಿ ಹಂತದ ಕೂಲಿ ಕಾರ್ಮಿಕರು, ವ್ಯವಸಾಯದ ಕೂಲಿ ಕಾರ್ಮಿಕರು, ನಗರ ಕೊಳಚೆ ಪ್ರದೇಶದ ಮತ್ತು ತಾತ್ಕಾಲಿಕ ಅಥವಾ ಪೂರ್ಣ ಪ್ರಮಾಣದ ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಖಾಲಿ ಇರುವ ಉಪಕೇಂದ್ರ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಗಿರಿಜನ ಹಾಡಿ, ದುರ್ಗಮ ಪ್ರದೇಶ, ಬೆಟ್ಟಗುಡ್ಡ, ಹಳ್ಳಿಗಾಡು ಪ್ರದೇಶಗಳಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಲಸಿಕೆ ಪಡೆಯದೇ ಇರುವ ಮಕ್ಕಳ ಮತ್ತು ಗರ್ಭಿಣಿಯರ ಹೆಡ್‍ಕೌಂಟ್ ಸರ್ವೆ ಮಾಡಿ ಲಸಿಕೆಯಿಂದ ವಂಚಿತರಾದ ಮತ್ತು ಮಧ್ಯದಲ್ಲೇ ಲಸಿಕೆ ನಿಲ್ಲಿಸಿರುವ ಮಕ್ಕಳ ಮತ್ತು ಗರ್ಭಿಣಿಯರ ಲಸಿಕಾ ಕ್ರಿಯಾಯೋಜನೆ ತಯಾರಿಸಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡಲಾಗುವದು ಎಂದು ತಿಳಿಸಿದರು.
ತಾ. 11 ರಿಂದ 31 ರವರೆಗೆ ಡಿಪಿಟಿ/ಟಿಡಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, 1ನೇ ತರಗತಿ ಮಕ್ಕಳಿಗೆ ಡಿಪಿಟಿ ಲಸಿಕೆ, 2 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಟಿಡಿ ಲಸಿಕೆಯನ್ನು ಶಾಲೆಗಳಲ್ಲಿ ನೀಡಲಾಗುತ್ತಿದೆ. ಮಕ್ಕಳಲ್ಲಿ ಕಂಡುಬರಬಹುದಾದ ಮಾರಣಾಂತಿಕ ರೋಗವಾದ ಡಿಪ್ತೀರಿಯಾ (ಗಂಟಲು ಮಾರಿ) ತಡೆಗಟ್ಟಲು ತಪ್ಪದೇ ಲಸಿಕೆ ಹಾಕಿಸಿರಿ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಎಂದರು.
ಜಿಲ್ಲಾ ಸಮಗ್ರ ಗಿರಿಜನ ಯೋಜನಾಧಿಕಾರಿ ಶಿವಕುಮಾರ್ ಮಾತನಾಡಿದರು. ಗ್ರಾ.ಪಂ. ಸದಸ್ಯ ಮುತ್ತು ಅಧ್ಯಕ್ಷತೆ ವಹಿಸಿದ್ದರು. ಬಿಹೆಚ್‍ಇಒ ಶಿವಯ್ಯ ಸ್ವಾಗತಿಸಿದರು. ಡಿಎಚ್‍ಇಓ ರಮೇಶ್ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಯತಿರಾಜ್, ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿಗಳು, ಡಾ. ಹೊಸಮನಿ, ತಿತಿಮತಿ, ಡಿ.ಎನ್.ಓ ಸುಶೀಲಾ, ಗ್ರಾಮ ಪಂಚಾಯಿತಿ ಪಿಡಿಓ ಮಮತಾ, ಶಾಲಾ ಶಿಕ್ಷಕ ರಾಮಚಂದ್ರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದೇವರಾಜು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.