ವೀರಾಜಪೇಟೆ, ನ. 30: ಕೊಡಗಿನ ಪ್ರತಿಭೆಗಳಾದ ಅಮ್ಮತ್ತಿಯ ಕೊಂಗಾಂಡ ಗಗನ್ ಕರುಂಬಯ್ಯ ಹಾಗೂ ಉದ್ದಪಂಡ ತಿಮ್ಮಣ್ಣ ತಾ. 23, 24ರಂದು ಬೆಂಗಳೂರಿನ ಕೋಡೆಸ್ ಅವರಣದಲ್ಲಿ ಆಯೋಜಿಸಿದ್ದ 44ನೇ ವರ್ಷದ ಕೆ-1000 ಇಂಡಿಯನ್ ನ್ಯಾಷನಲ್ ಚಾಂಪಿಯನ್‍ಶಿಪ್ ರ್ಯಾಲಿಯಲ್ಲಿ (ಎಸ್.ಯು.ವಿ. ವಿಭಾಗ) ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸಾಲಿನಲ್ಲಿ ನಡೆದ ನಾಲ್ಕು ರ್ಯಾಲಿಗಳ ಪೈಕಿ ಮೂರರಲ್ಲಿ ಜಯಗಳಿಸಿದ್ದಾರೆ.
ಈಗಾಗಲೇ 2019ನೇ ಸಾಲಿನಲ್ಲಿ ಚೆನೈ , ಕೊಯಮತ್ತೂರು ರ್ಯಾಲಿಯಲ್ಲಿ ಇದೇ ಜೋಡಿ ಪ್ರಥಮ ಸ್ಥಾನ ಪಡೆದು ಕೊಡಗಿನ ಕ್ರೀಡಾ ಹಿರಿಮೆಗೆ ಗರಿ ಮೂಡಿಸಿದ್ದಾರೆ. ತಿಮ್ಮಣ್ಣ ಅವರು ಅಮ್ಮತ್ತಿಯಲ್ಲಿ ರ್ಯಾಲಿ ಆಯೋಜಿಸಿ ಎಲ್ಲರ ಗಮನ ಸೆಳೆದಿದ್ದಾರೆ. ರ್ಯಾಲಿಯಲ್ಲಿ ಅಮ್ಮತ್ತಿ ತಂಡ ಹಿಂದಿನಿಂದಲೂ ತನ್ನದೆ ಆದ ಸಾಧನೆಯನ್ನು ಮಾಡುತ್ತಿದೆ. ಡಿಸೆಂಬರ್‍ನಲ್ಲಿ ಕೇರಳದ ಕೊಚ್ಚಿಯಲ್ಲಿ 21 ಹಾಗೂ 22 ರಂದು ನಡೆಯುವ ಈ ಸಾಲಿನ ಕೊನೆಯ ಪಾಪ್ಯುಲರ್ ಇಂಡಿಯನ್ ನ್ಯಾಷನಲ್ ಚಾಂಪಿನ್ ಶಿಪ್ ರ್ಯಾಲಿಯಲ್ಲಿ ಇದೇ ಜೋಡಿ ಭಾಗವಹಿಸಲಿದೆ.
ಬೆಂಗಳೂರಿನಲ್ಲಿ ನಡೆದ ಕೆ-1000 ನ್ಯಾಷನಲ್ ರ್ಯಾಲಿ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡ ಉದ್ದಪಂಡ ತಿಮ್ಮಣ್ಣ, 2 ದಿನದ ಈ ರ್ಯಾಲಿಯು ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಕೋಡೆಸ್ ಫ್ಯಾಕ್ಟರಿ ಆವರಣದಲ್ಲಿ ನಡೆಯಿತು. ಇದರಲ್ಲಿ ಒಟ್ಟು 56 ಕಾರುಗಳು ಭಾಗವಹಿಸಿದ್ದವು, ರ್ಯಾಲಿಯ ಕೊನೆಯಲ್ಲಿ 17 ಕಾರುಗಳು ಮಾತ್ರ ಗುರಿ ಮುಟ್ಟಿತು. ಇದರಲ್ಲಿ ಕೊಂಗಾಂಡ ಗಗನ್ ಕರುಂಬಯ್ಯ ಚಾಲಕರಾಗಿಯೂ, ನಾನು ಸಹ ಚಾಲಕನಾಗಿಯೂ ಭಾಗವಹಿಸಿದ್ದವು. ಈ ರ್ಯಾಲಿಯಲ್ಲಿ ನಾವು ಪ್ರಥಮ ಸ್ಥಾನ ಪಡೆದೆವು. ಈ ರ್ಯಾಲಿಯಲ್ಲಿ ಕೊಡಗಿನ ರ್ಯಾಲಿ ಪಟುಗಳಾದ ಮೆಕೇರಿರ ಕಾರ್ಯಪ್ಪ ಮತ್ತು ಅಭಿನವ್ ಜೋಡಿ, ಅಮ್ಮಣÀಕುಟ್ಟಂಡ ಅವಿನ್ ನಂಜಪ್ಪ ಜೋಡಿ ಹಾಗೂ ವೀರಾಜಪೇಟೆಯ ಸುಹೇನ್ ಕಬೀರ್ ಜೋಡಿಗಳು ಭಾಗವಹಿಸಿದ್ದವು ಎಂದು ಮಾಹಿತಿ ನೀಡಿದರು.
- ಡಿಎಂಆರ್