*ಗೋಣಿಕೊಪ್ಪಲು, ನ. 30: ಸಾಹಿತ್ಯ ನಮಗೆ ಬದುಕುವ ಮಾರ್ಗವನ್ನು ತೋರಿಸಿ ಉತ್ತಮ ಮನುಷ್ಯನಾಗುವಂತೆ ರೂಪಿಸುತ್ತದೆ ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಕನ್ನಡ ಸಾಹಿತ್ಯದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಾಲೇಜಿನ ಆಶ್ರಯದಲ್ಲಿ ನಡೆದ ಎಸ್.ಎಸ್. ರಾಮಮೂರ್ತಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೊಡಗಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕನ್ನಡದ ಕವಿಗಳು ಮತ್ತು ಕಲಾವಿದರ ಕೊಡುಗೆ ವಿಷಯದ ಕುರಿತು ಉಪನ್ಯಾಸ ನೀಡಿದರು.
ನಿರ್ದಿಷ್ಟ ಬದುಕು ಮತ್ತು ಭವಿಷ್ಯ ರೂಪಿಸಲು ಸಾಹಿತ್ಯದ ಓದಿನಿಂದ ಸಾಧ್ಯವಾಗುತ್ತದೆ. ಬದುಕಿನ ಬಗ್ಗೆ ಕನಸುಗಳನ್ನು ಕಟ್ಟಿ ಉತ್ತಮ ಗುರಿ ಹೊಂದಿ ಭವಿಷ್ಯ ರೂಪಿಸಿಕೊಳ್ಳಬೇಕು. ಅನುಭವ ಮತ್ತು ಕಲ್ಪನೆಗಳ ಮೂಲಕ ಬರಹಕ್ಕೆ ಮುಂದಾಗಿ ತಮ್ಮ ಅನುಭವಕ್ಕೆ ಅನುಗುಣವಾಗಿ ಸಾಹಿತ್ಯ ರಚನೆಗೆ ತೊಡಗಿಸಿಕೊಂಡು ಶ್ರೇಷ್ಠ ಸಾಹಿತಿಗಳ ಬರಹಗಳನ್ನು ಅಧ್ಯಾಯನ ಮಾಡುವುದರಿಂದ ಹೆಚ್ಚಿನ ಜ್ಞಾನ ಪಡೆದುಕೊಳ್ಳಬಹುದು. ಇದರಿಂದ ಮೌಲ್ಯಾಧರಿತ ಬದುಕು ನಡೆಸಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಸಾಹಿತ್ಯ ಕಲೆಗಳನ್ನು ಮೈಗೂಡಿಸಿಕೊಂಡವರು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ ಮತ್ತು ಭ್ರಷ್ಟಾಚಾರಗಳಿಂದ ದೂರ ಉಳಿಯುತ್ತಾರೆ. ಸಮಾಜದ ಬದಲಾವಣೆಗೆ ಹಂಬಲಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ ಎಂದು ಹೇಳಿದರು. ಇಂದು ಜಿಲ್ಲೆಯಲ್ಲಿ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ವಾತವರಣ ನಿರ್ಮಾಣವಾಗಿದೆ. ಬರಹಗಾರರನ್ನು ಗುರುತಿಸುವ ವ್ಯವಸ್ಥೆ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂಬ ಹೆಮ್ಮೆ ನಮಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ವಿಜು ಸುಬ್ರಮಣಿ ಮಾತನಾಡಿ, ಕನ್ನಡ ಚಟುವಟಿಕೆಗಳನ್ನು ಹೆಚ್ಚು ನಡೆಸುತ್ತಿರುವ ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು ಬಹಳ ಶ್ರೇಷ್ಠ ಮಟ್ಟಕ್ಕೆ ಏರಿದೆ. ಕನ್ನಡ ಚಟುವಟಿಕೆಗಳನ್ನು ಆಚರಿಸುವ ಸಲುವಾಗಿ ಕಾಲೇಜಿನಲ್ಲಿ ಎದುರಾಗಿರುವ ಸಭಾಂಗಣದ ಕೊರತೆಯನ್ನು ನೀಗಿಸಲು ಜಿ.ಪಂ. ವ್ಯವಸ್ಥೆಯಲ್ಲಿ ಕ್ರಮ ಕೈಗೊಳ್ಳಲಾಗುವದು. ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಗುವದು ಎಂದು ಸಭೆಗೆ ಭರವಸೆ ನೀಡಿದರು.
ಕಾಲೇಜು ಪ್ರಾಂಶುಪಾಲೆ ಡಾ. ಭವಾನಿ ಮಾತನಾಡಿ, ಮಕ್ಕಳಲ್ಲಿ ಕನ್ನಡ ಕಂಪು ಪಸರಿಸಲು ಬೇಕಾದ ವಾತವರಣವನ್ನು ಕಾಲೇಜಿನಲ್ಲಿ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಬದಕಲು ರೂಪಿಸುವ ಗುರಿ ಹೊಂದಬೇಕು. ಜ್ಞಾನವನ್ನು ಹೆಚ್ಚಿಸಲು ಶಿಸ್ತುಬದ್ದ ಓದು ಮುಖ್ಯ. ಗುರಿಯನ್ನು ಹೊಂದಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಕನಸುಗಳನ್ನು ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ದತ್ತಿ ಉಪನ್ಯಾಸದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷ ಜಾನ್ಸ್ನ್, ಉಪನ್ಯಾಸಕಿ ಶೈನಿ, ಉಪನ್ಯಾಸಕ ಶಿವದಾಸ್ ಸೇರಿದಂತೆ ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಹಚ್ಚೇವು ಕನ್ನಡ ದೀಪ ಗೀತೆಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.
- ಎನ್.ಎನ್. ದಿನೇಶ್