ಮಡಿಕೇರಿ, ನ. 30: ಮಡಿಕೇರಿ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಅಗತ್ಯ ಪರಿಹಾರದೊಂದಿಗೆ; ಗ್ರಾಮೀಣ ಜನತೆಗೆ ಕುಡಿಯುವ ನೀರು, ಸಂಪರ್ಕ ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರೈಸುವಂತೆ; ಇಂದು ನಡೆದ ತಾ.ಪಂ. ಕೆಡಿಪಿ ಮಾಸಿಕ ಸಭೆಯಲ್ಲಿ ಆಯಾ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಗಣಪತಿ ಹಾಗೂ ಉಪಾಧ್ಯಕ್ಷ ಸಂತು ಸುಬ್ರಮಣಿ ಪ್ರಸ್ತಾಪಿಸಿದರು. ಈ ವೇಳೆ ಧ್ವನಿಗೂಡಿಸಿದ ಅಧ್ಯಕ್ಷರು ಸಂಪಾಜೆ ವ್ಯಾಪ್ತಿಯ ಚೆಂಬು, ಪೆರಾಜೆ, ನಾಪೋಕ್ಲು ಬಳಿ ಬೇತು ಮುಂತಾದೆಡೆಗಳಲ್ಲಿ ನಿರಂತರ ನೀರಿನ ಸಮಸ್ಯೆ ಕೇಳಿಬರುತ್ತಿದೆ ಎಂದರು.ಈ ಬಗ್ಗೆ ಕಾರ್ಯನಿರ್ವಹಣಾ ಧಿಕಾರಿ ಲಕ್ಷ್ಮೀ ಅವರು ಅಭಿಪ್ರಾಯ ನೀಡಿ; ಕೆಲವೆಡೆ ಮಳೆಗಾಲದಲ್ಲಿ ನೈಸರ್ಗಿಕ ನೀರಿನ ಸದ್ಭಳಕೆ ಮಾಡಿಕೊಳ್ಳುತ್ತಿದ್ದು; ಬೇಸಿಗೆಯ ಮೂರು ತಿಂಗಳು ನೀರಿನ ಬವಣೆ ಎದುರಾಗುತ್ತಿದೆ ಎಂದರು. ಆ ದಿಸೆಯಲ್ಲಿ ಅಧಿಕಾರಿಗಳು ಈಗಿನಿಂದಲೇ ಕ್ರಮ ವಹಿಸುವ ಮೂಲಕ; ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಂದ ವರದಿ ಪಡೆದು ಅಗತ್ಯ ವ್ಯವಸ್ಥೆ ರೂಪಿಸಲು ಸಲಹೆಯಿತ್ತರು.
(ಮೊದಲ ಪುಟದಿಂದ) ಅಲ್ಲದೆ, ಮಳೆ ಹಾನಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಲಭಿಸದಿರುವ ಕುರಿತು ಮರು ಪರಿಶೀಲಿಸಿ ಅಗತ್ಯ ನೆರವಿಗೆ ಶಿಫಾರಸ್ಸು ಮಾಡಲಾಗವದು ಎಂದು ಭರವಸೆ ನೀಡಿದರು. ಗ್ರಾಮೀಣ ರೈತರಿಗೆ ಈತನಕವೂ ಸೂಕ್ತ ಪರಿಹಾರ ಸಿಕ್ಕಿಲ್ಲವೆಂದು ಗಣಪತಿ ಹಾಗೂ ಸಂತು ಸುಬ್ರಮಣಿ ಗಮನ ಸೆಳೆದರು.
ನೈಜ ರೈತರಿಗೆ ಪ್ರೋತ್ಸಾಹಿಸಿ : ಸರಕಾರದ ಯೋಜನೆಯಂತೆ ಯಾಂತ್ರೀಕೃತ ನಾಟಿಗೆ ಮಾತ್ರ ಸಹಾಯಧನವಿದ್ದು; ಹಳ್ಳಿಗಳಲ್ಲಿ ರೈತರು ಉಳುಮೆ ಮಾಡಿ; ನಾಟಿ ಮಾಡುತ್ತಿದ್ದು; ಅಂತಹ ರೈತರಿಗೆ ಯಾವದೇ ಸವಲತ್ತು ದೊರಕುತ್ತಿಲ್ಲ; ಇಂತಹ ರೈತರನ್ನು ಗುರುತಿಸಿ ಅಧಿಕಾರಿಗಳು ಸೂಕ್ತ ಪ್ರೋತ್ಸಾಹ ನೀಡಬೇಕೆಂದು ಒತ್ತಾಯಿಸಿದರು.
ಗಿಡ ಪೂರೈಕೆ : ಚೆಟ್ಟಳ್ಳಿಯ ಸಂಶೋಧನಾ ಕೇಂದ್ರದಲ್ಲಿ ರೈತರಿಗೆ ಬೆಣ್ಣೆ ಹಣ್ಣು ಇತ್ಯಾದಿ ಗಿಡಗಳನ್ನು ಪೂರೈಸುತ್ತಿದ್ದು; ತೋಟಗಾರಿಕಾ ಇಲಾಖೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನದಿಂದ ಆರ್ಥಿಕ ಸಹಾಯ ಒದಗಿಸುತ್ತಿದೆ; ಇದನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕೆಂದು ಅಧಿಕಾರಿ ಚಂದ್ರಶೇಖರ್ ಗಮನ ಸೆಳೆದರು.
ಶಾಲೆಗಳಿಗೂ ಲಭ್ಯ : ಸರಕಾರಿ ಶಾಲಾ ಆವರಣಗಳಲ್ಲಿ ಇಂತಹ ಫಸಲುಗಳನ್ನು ಬೆಳೆದು ಆರ್ಥಿಕ ಸ್ಥಿತಿ ಸುಧಾರಣೆಗೆ ಪ್ರೋತ್ಸಾಹವಿದ್ದು; ಒಂದೊಮ್ಮೆ 80 ರೂ. ಇದ್ದ ಬೆಣ್ಣೆ ಹಣ್ಣು ಬೆಲೆ ಇಂದು ಕೆ.ಜಿ.ಗೆ ರೂ. 300 ರಷ್ಟು ಏರಿಕೆಯಾಗಿದೆ ಎಂದು ಉದಾಹರಣೆ ನೀಡಿದರು.
ಆರೋಗ್ಯ ಕಾರ್ಯಕ್ರಮ : ಆರೋಗ್ಯ ಇಲಾಖೆಯಿಂದ ಗರ್ಭಿಣಿಯರು, ಬಾಣಂತಿಯರು, ಶಿಶುಗಳು ಸೇರಿದಂತೆ; ಮಕ್ಕಳ ಆರೋಗ್ಯ ಸುಧಾರಣೆ ಮತ್ತು ಪೌಷ್ಠಿಕ ಬೆಳವಣಿಗೆಗೆ ಪೂರಕ ಚಿಕಿತ್ಸೆಯೊಂದಿಗೆ; ರೋಗ ನಿರೋಧಕ ಚುಚ್ಚು ಮದ್ದು ಕಾಲ ಕಾಲಕ್ಕೆ ನೀಡಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿ ಡಾ. ಗೋಪಿನಾಥ್ ಸಭೆಗೆ ಮಾಹಿತಿಯಿತ್ತರು.
ಅಂಗನವಾಡಿಗಳಲ್ಲಿ ಕಣ್ಣಿಡಿ : ಅನೇಕ ಸರಕಾರದ ಕಾರ್ಯಕ್ರಮಗಳಲ್ಲಿ ಅಂಗನವಾಡಿಗಳ ಮುಖಾಂತರ, ಗರ್ಭಿಣಿಯರು, ಬಾಣಂತಿಯರು, ಶಿಶುಗಳ ಪೌಷ್ಠಿಕ ಅಂಶಗಳ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲವೆಂದು ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು.
ತಾವು ಈಚೆಗೆ ಕಕ್ಕಬ್ಬೆ ವ್ಯಾಪ್ತಿ ಪ್ರವಾಸ ವೇಳೆ ಮತ್ತು ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಾಧೀಶರೊಬ್ಬರು ಭಾಗಮಂಡಲ ಭೇಟಿ ಸಂದರ್ಭ; ರಸ್ತೆ ಮಾರ್ಗ ಬದಿ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವ ಕುರಿತು ಗಮನಿಸಿದ್ದಾರೆ ಎಂದು ಪ್ರಸ್ತಾಪಿಸಿದರು. ಈ ದಿಸೆಯಲ್ಲಿ ಆಯ ಶಾಲೆಗಳು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ನೋಟೀಸ್ ಜಾರಿಗೊಳಿಸಿ, ಮಕ್ಕಳ ಬಗ್ಗೆ ಕಾಳಜಿ ವಹಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಿತ್ತಳೆ ಪುನಶ್ಚೇತನ : ಕೊಡಗಿನಲ್ಲಿ ಕಿತ್ತಳೆ ಪುನಶ್ಚೇತನ, ಕೃಷಿ ಉಪಕರಣಗಳು, ಟಾರ್ಪಾಲು ಇತ್ಯಾದಿಯನ್ನು ರೈತರಿಗೆ ಸಕಾಲದಲ್ಲಿ ಮಾಹಿತಿ ನೀಡಿ; ಸೌಲಭ್ಯ ಕಲ್ಪಿಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ನಿರ್ದೇಶಿಸಿದರು. ಮೀನು ಮಾರಾಟಗಾರರಿಗೆ ಕೂಡ ಇಲಾಖೆಯಿಂದ ಸಹಾಯಧನವಿದ್ದು; ಸರಕಾರದ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲಪಿಸಲು ಸೂಚಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಅನುಪಾಲನಾ ವರದಿಯೊಂದಿಗೆ ಪ್ರಗತಿ ಬಗ್ಗೆ ಸಭೆಗೆ ತಿಳಿಸಿದರು.