ವೀರಾಜಪೇಟೆ, ನ. 29: ವೀರಾಜಪೇಟೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ವಿರೋಧ ಹಾಗೂ ಬೆಂಬಲ ವ್ಯಕ್ತಪಡಿಸುತ್ತಿದೆ. ಈ ಎರಡು ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ವೀರಾಜಪೇಟೆ ಚೇಂಬರ್ ಆಫ್ ಕಾಮರ್ಸ್‍ನ ಸ್ಥಾನೀಯ ಸಮಿತಿಯು ಆಗ್ರಹಿಸಿದೆ.

ಸರಕಾರದ ಆದೇಶದಂತೆ ವೀರಾಜಪೇಟೆ ಸಿದ್ದಾಪುರ ರಸ್ತೆಯ ಸುಂಕದ ಕಟ್ಟೆ ಜಂಕ್ಷನ್‍ನಿಂದ ಆರ್ಜಿ ಗ್ರಾಮದ ಸೇತುವೆಯವರೆಗೂ ರಸ್ತೆಯ ಎರಡು ಬದಿಗಳಲ್ಲಿ ಅಗಲೀಕರಣಕ್ಕೆ ಸಿದ್ಧತೆ ನಡೆದಿದೆ. ಈ ಅಗಲೀಕರಣದಿಂದ ಸಾಧಕ ಬಾಧಕಗಳೇನು ಎಂಬದನ್ನು ರಸ್ತೆ ಪರ, ವಿರೋಧಿ ಸಂಘಟನೆಗಳು ಅರಿಯಬೇಕಾಗಿದೆ ಎಂದು ಚೇಂಬರ್ ಅಧ್ಯಕ್ಷ ಕಾಶಿ ಕಾವೇರಪ್ಪ ತಿಳಿಸಿದ್ದಾರೆ.

ವೀರಾಜಪೇಟೆಯ ಮುಖ್ಯ ರಸ್ತೆಯ ಅಗಲೀಕರಣ ಇತಿಮಿತಿಗೊಳಪಟ್ಟು ಆಗಬೇಕು. ಇದರಿಂದ ಯಾರಿಗೂ ತೊಂದರೆಯಾಗಬಾರದು. ರಸ್ತೆಗಾಗಿ ಜಾಗ ತೆರವು ಮಾಡಿ ಕೊಟ್ಟವರಿಗೂ ಸೂಕ್ತ ಪರಿಹಾರ ದೊರೆಯಬೇಕು ಎಂಬದು ಚೇಂಬರ್ ಆಫ್ ಕಾಮರ್ಸ್ ನಿಲುವು ಆಗಿದೆ. ಈಚೆಗೆ ನಡೆದ ಚೇಂಬರ್‍ನ ಸಮಿತಿ ಸಭೆಯಲ್ಲಿ ವೀರಾಜಪೇಟೆ ರಸ್ತೆ ಅಗಲೀಕರಣದ ಸಂಬಂಧದಲ್ಲಿ ಚರ್ಚೆ ನಡೆದಿದ್ದು ರಸ್ತೆ ಅಗಲೀಕರಣದ ಪರ, ವಿರೋಧ ಬಣಗಳ ಅಭಿಪ್ರಾಯ ಸಲಹೆಗಳ ಬಗ್ಗೆಯೂ ಮಾತುಕತೆ ನಡೆದಿದೆ. ಕಟ್ಟಡದ ಮಾಲೀಕರಿಂದ ಎರಡನೇ ಬಾರಿ ರಸ್ತೆ ಅಗಲೀಕರಣದ ಜಾಗ ತೆರವಿಗೆ ಕಡ್ಡಾಯವಾಗಿ ಪರಿಹಾರ ಕೊಡಲೇಬೇಕೆಂದೂ ಸಭೆ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.

ಸಮಿತಿಯ ಉಪಾಧ್ಯಕ್ಷ ಸಿ.ಕೆ. ಮುಸ್ತಾಫ ಮಾತನಾಡಿ, ವಸತಿ ಪ್ರದೇಶದಲ್ಲಿ ರಸ್ತೆ ಅಗಲೀಕರಣದ ಅಂತರವನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಈ ಇತಿ ಮಿತಿಗೊಳಪಟ್ಟು ರಸ್ತೆ ಅಗಲೀಕರಣ ಗೊಳ್ಳುವದರಿಂದ ವೀರಾಜಪೇಟೆ ಪಟ್ಟಣದ ಅಸ್ತಿತ್ವ ಉಳಿಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಅಮ್ಮಣಿಚಂಡ ರವಿ ಉತ್ತಪ್ಪ ನುಡಿದರು.

ಈಗಿನ 30 ಅಡಿಯ ರಸ್ತೆ ಅಗಲೀಕರಣದ ನಿಲುವು ಮುಂದುವರೆದರೆ ಸುಂಕದ ಕಟ್ಟೆಯಿಂದ ದೊಡ್ಡಟ್ಟಿ ಚೌಕಿಯವರೆಗೆ ಸುಮಾರು 28 ಕುಟುಂಬಗಳು ಮನೆ ಮಠ ಇಲ್ಲದೆ ಬೀದಿ ಪಾಲಾಗಲಿದ್ದಾರೆ. ಜೊತೆಗೆ ಕೇಂದ್ರ ಸರಕಾರದ ಗ್ರಾಮೀಣ ವಿದ್ಯುತ್ ಯೋಜನೆಯಡಿಯಲ್ಲಿ ಸುಮಾರು ಐದು ಕೋಟಿ ವೆಚ್ಚದಲ್ಲಿ 300ಕ್ಕೂ ಅಧಿಕ ವಿದ್ಯುತ್ ಕಂಬಗಳು, ಅಗತ್ಯ ಟ್ರಾನ್ಸ್‍ಫಾರ್ಮರ್‍ಗಳು, ಹೊಸ ವಿದ್ಯುತ್ ಸಂಪರ್ಕದ ತಂತಿಗಳ ಜೋಡಣೆ ನಡೆದಿದೆ. ಚೆಸ್ಕಾಂ ಇಲಾಖೆಯ ಪ್ರಕಾರ ಇದನ್ನು ಬದಲಿಸಲು ಸಮಯ ಹಾಗೂ ಅಧಿಕ ವೆಚ್ಚ ಆಗಲಿದೆ ಎಂಬದನ್ನು ರಸ್ತೆ ಅಗಲೀಕರಣದ ಉಸ್ತುವಾರಿಯವರು ಮನಗಾಣಬೇಕಾಗಿದೆ ಎಂದು ರವಿ ಉತ್ತಪ್ಪ ಹೇಳಿದರು.