ಕಣಿವೆ, ನ. 29: ಹೆತ್ತ ತಾಯಿಯನ್ನು ಗೌರವಿಸುವ ರೀತಿ ನದಿಯನ್ನು ಪ್ರತಿಯೊಬ್ಬರು ಗೌರವಿಸಿದರೆ ಮಾತ್ರ ಜಲಮೂಲಗಳು ಉಳಿಯುತ್ತವೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದ ಆವರಣದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನದ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ‘ನದಿ ಹಬ್ಬ’ ಉದ್ಘಾಟಿಸಿ ಮಾತನಾಡಿದ ಅವರು, ನದಿಯಿಂದ ಕುಡಿಯುವ ಶುದ್ಧ ನೀರನ್ನು ಕೊಳವೆಗಳಲ್ಲಿ ಮನೆಗೆ ಪಡೆಯುತ್ತೇವೆ. ಅದೇ ನದಿಗೆ ನಾವುಗಳು ಮಲಿನಗೊಳಿಸಿದ ನೀರನ್ನು ಹರಿಸುತ್ತೇವೆ. ಇದು ನಿಲ್ಲಬೇಕು. ನದಿಯ ಮೇಲೆ ನಿತ್ಯವೂ ಮಾಡುವ ಸ್ವೇಚ್ಚಾಚಾರಕ್ಕೆ ಜಲಮೂಲಗಳೇ ನಾಶವಾಗುತ್ತವೆ. ಒಂದು ನದಿ ತನ್ನ ಹರಿವು ಸ್ಥಗಿತಗೊಳಿಸಿದರೆ ಒಂದು ನಾಗರೀಕತೆಯೇ ನಾಶವಾಗುತ್ತದೆ. ಒಂದು ಸಂಸ್ಕೃತಿಯೇ ಹಾಳಾಗುತ್ತದೆ. ಕಾವೇರಿ ಇಲ್ಲವಾದರೆ ಕರ್ನಾಟಕವೇ ಇಲ್ಲವಾಗುತ್ತದೆ ಎಂದು ಸೂಲಿಬೆಲೆ ಆತಂಕ ವ್ಯಕ್ತಪಡಿಸಿದರು.
ಯುವ ಬ್ರಿಗೇಡ್ ಕಾವೇರಿ, ಕಪಿಲೆ, ಭೀಮಾ, ಮಾಲತಿ, ನಂದಿನಿ ನದಿಗಳೂ ಸೇರಿದಂತೆ ರಾಜ್ಯದಲ್ಲಿನ ಒಟ್ಟು ಒಂಭತ್ತು ನದಿಗಳ ನಿರಂತರ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದೆ. ನದಿಗಳು ಉಳಿದರೆ ಮನುಷ್ಯ ಸೇರಿ ದಂತೆ ಜೀವಕೋಟಿ ಉಳಿಯುತ್ತದೆ. ನಮಗೆ ನಮ್ಮ ಪೂರ್ವಜರು ಈ ನದಿಯನ್ನು ಮಲಿನಗೊಳಿಸದೇ ಅದೆಷ್ಟು ಶುದ್ಧವಾಗಿ ಬಿಟ್ಟು ಹೋಗಿದ್ದರೋ ಹಾಗೆಯೇ ನಾವುಗಳು ಕೂಡ ನಮ್ಮ ಮಕ್ಕಳಿಗೆ ಶುದ್ಧವಾಗಿಯೇ ಬಿಟ್ಟು ಹೋಗಬೇಕು. ಅಂತಹ ಮನಸ್ಥಿತಿ ಎಲ್ಲರದ್ದಾಗಬೇಕು. ಅದಕ್ಕಾಗಿಯೇ ಕಾವೇರಿ ನದಿಗೆ ಚಂದ್ರಮೋಹನ್ ತಂಡ ಕಳೆದ ನೂರು ತಿಂಗಳಿಂದ ನಿರಂತರವಾಗಿ ಹುಣ್ಣಿಮೆ ಯಂದು ಮಹಾ ಆರತಿ ಆಚರಿಸಿ ಕೊಂಡು ಬಂದಿರುವದು ಹೆಮ್ಮೆಯ ವಿಚಾರ ಎಂದರು. ಇಂದಿನ ವಿದ್ಯಾರ್ಥಿಗಳಲ್ಲಿ ನದಿಯ ಮಹತ್ವ, ಪಾವಿತ್ರ್ಯತೆ ಹಾಗೂ ಸ್ವಚ್ಛತೆಯ ಅರಿವು ಮೂಡಬೇಕು ಎಂದು ಹೇಳಿದರು.
ನೆಲ, ಜಲ ಮತ್ತು ಪರಿಸರದ ಮಹತ್ವದ ಸಾಮಾನ್ಯ ಜ್ಞಾನವನ್ನು ಕಲಿಸಿಕೊಡುವ ಹಾಗೆ ನಮ್ಮ ದೇಶದಲ್ಲೂ ಪುಸ್ತಕದ ಬದನೆಕಾಯಿ ಗಿಂತ ಹೆಚ್ಚಾಗಿ ಪರಿಸರ ಕಾಯಕದ, ಬದುಕುವ ಕಲೆಯ ಸಾಮಾನ್ಯ ಜ್ಞಾನವನ್ನು ಮಕ್ಕಳಿಗೆ ಕಲಿಸಿದರೆ ಮಾತ್ರ ನಮ್ಮ ನಾಡು, ನುಡಿ, ನೆಲ, ಜಲ, ಪರಿಸರ ರಕ್ಷಣೆಯಾಗುತ್ತದೆ.
(ಮೊದಲ ಪುಟದಿಂದ) ಇಂದಿನ ತರುಣ-ತರುಣಿಯರಿಂದ ಮಾತ್ರ ಸಾಮಾಜಿಕ ಸಾಧನೆ ಸಾಧ್ಯ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕಳೆದ ನಲವತ್ತು ವರ್ಷಗಳಲ್ಲಿ ಇದ್ದ ವೃಷಭಾವತಿ ನದಿಯನ್ನು ಕೆಂಗೇರಿ ಕೊಳಚೆ ಕಾಲುವೆ ಯಲ್ಲಿ ನಾವುಗಳು ಕಾಣುತ್ತಿದ್ದೇವೆ. ಅಂತಹ ದುಸ್ಥಿತಿ ಕಾವೇರಿಗಲ್ಲ, ಯಾವ ನದಿಗಳಿಗೂ ಬರಬಾರದು ಎಂದು ಸೂಲಿಬೆಲೆ ಕೈಮುಗಿದು ಪ್ರಾರ್ಥಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಭೂಗೋಳ ತಜ್ಞ ಡಾ. ಎಚ್.ಎಸ್. ಎಂ. ಪ್ರಕಾಶ್, ಇತ್ತೀಚಿನ ವರ್ಷಗಳಲ್ಲಿ ಪರಿಸರದ ಮೇಲಾಗುತ್ತಿರುವ ಹಲವು ಭೂ ವೈಜ್ಞಾನಿಕ ಅಂಶಗಳ ಕುರಿತು ಉಪನ್ಯಾಸ ನೀಡಿದರು. ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ, ನದಿಯನ್ನು ಹೆತ್ತ ತಾಯಿ ಹಾಗೂ ನಮಿಸುವ ದೇವರಂತೆ ಕಂಡರೆ, ನಮಗೂ ಒಳಿತು. ನದಿಯೂ ಕ್ಷೇಮ. ರಸ್ತೆ, ನೀರು, ಕಾಡು ಇವುಗಳನ್ನು ನಮ್ಮದು ಎನ್ನುವದಕ್ಕಿಂತ ನನ್ನದು ಎಂದು ಕಂಡು ಗೌರವಿಸಿದರೆ ನದಿ, ಪರಿಸರ ಎಲ್ಲವೂ ಉಳಿಯುತ್ತವೆ ಎಂದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ಪ್ರಾಸ್ತಾವಿಕ ಮಾತುಗಳಾಡಿ, ಹಿಂದೆ ಸ್ವಚ್ಛಂದವಾಗಿ ಹರಿಯುತ್ತಿದ್ದ ನದಿಯನ್ನು ಕಲುಷಿತಗೊಳಿಸಿದ ನಾವುಗಳೇ ಇಂದು ಆಂದೋಲನದ ಮೂಲಕ ಸ್ವಚ್ಛಗೊಳಿಸುವ ಕೆಟ್ಟ ಸ್ಥಿತಿಗೆ ಬಂದಿದ್ದೇವೆ. ನದಿಯೊಳಗಿದ್ದು ಹಣ ಕೊಟ್ಟು ಬಾಟಲಿ ನೀರು ತಂದು ಕುಡಿದು ದಣಿವಾರಿಸಿಕೊಳ್ಳುವ ಸ್ಥಿತಿಗೆ ಕಾವೇರಿ ನದಿಯನ್ನು ತಂದಿದ್ದೇವೆ ಎಂದು ವಿಷಾದಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಡಿ.ಆರ್. ಸೋಮಶೇಖರ್, ಅಕ್ಷಯ್, ವನಿತಾ ಚಂದ್ರ ಮೋಹನ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಪಿಡಿಓ ರಾಕೇಶ್, ಕುಶಾಲನಗರ ಪಟ್ಟಣ ಪಂಚಾಯತಿ ಸದಸ್ಯರಾದ ಖಲೀಮುಲ್ಲಾ, ಎಂ.ಬಿ. ಸುರೇಶ್ ಮತ್ತಿತರರು ಇದ್ದರು. ಶಿಕ್ಷಕ ಉ.ರಾ. ನಾಗೇಶ್ ನಿರೂಪಿಸಿದರು. ವಿದ್ಯಾರ್ಥಿನಿ ಫಲ್ಗುಣಿ ಪ್ರಾರ್ಥಿಸಿದರು.
-ಕೆ.ಎಸ್. ಮೂರ್ತಿ