ಸಿದ್ದಾಪುರ, ನ. 29: ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಭೂಮಿಯನ್ನು ಒತ್ತುವರಿ ದಾರರಿಂದ ತೆರವುಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಬಾರಿಯ ಮಹಾ ಮಳೆಗೆ ಸಿದ್ದಾಪುರದ ಗ್ರಾ,ಪಂ ವ್ಯಾಪ್ತಿಗೆ ಒಳಪಡುವ ಕರಡಿಗೋಡು, ಗುಹ್ಯ ಹಾಗೂ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು, ನಲ್ವತ್ತೆಕರೆ, ಕುಂಬಾರಗುಂಡಿ ಭಾಗದ ನದಿ ತೀರದ ನೂರಾರು ಮನೆಗಳು ಹಾನಿಗೊಳಗಾಗಿದ್ದವು.

ಈ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಲು ಜಿಲ್ಲಾಡಳಿತ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಶಾಶ್ವತ ಸೂರು ಕಲ್ಪಿಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ತಾ. 30 ರಂದು (ಇಂದು) ಅರೆಕಾಡಿನ ರಸ್ತೆಯಲ್ಲಿರುವ ಅಭ್ಯತ್‍ಮಂಗಲ ಗ್ರಾಮಕ್ಕೆ ಸೇರಿರುವ ಸರ್ವೆ ನಂ. ಒಂದರಲ್ಲಿ ಈ ಹಿಂದೆ ಗುರುತಿಸಿದ್ದ ಒತ್ತುವರಿ ಜಾಗವನ್ನು ತೆರವುಗೊಳಿಸುವ ಕಾರ್ಯ ನಡೆಯಲಿದೆ. ಇದಲ್ಲದೇ ಈ ಹಿಂದೆ ಸಂತ್ರಸ್ತರಿಗೆ ಸೂರು ಒದಗಿಸಲು ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡುವಿನಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆಯು ಗುರುತಿಸಿದ್ದ ಒತ್ತುವರಿ ಜಾಗದ ಸರ್ವೆ ಕಾರ್ಯ ಕೂಡ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಬಾರಿಯ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಗ್ರಾ.ಪಂ ವ್ಯಾಪ್ತಿಗೊಳಪಡುವ ನದಿ ತೀರದ ನಿವಾಸಿಗಳು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ನೆಲ್ಯಹುದಿಕೇರಿಯ ಗ್ರಾಮದ ಬೆಟ್ಟದಕಾಡು, ಕುಂಬಾರಗುಂಡಿಯ ಮನೆ ಕಳೆದುಕೊಂಡ ನೂರಾರು ಕುಟುಂಬಗಳು ಸ್ಥಳೀಯ ಸರ್ಕಾರಿ ಶಾಲೆಯ ಪರಿಹಾರ ಕೇಂದ್ರದಲ್ಲಿ ಇಂದಿಗೂ ಆಶ್ರಯಪಡೆದಿದ್ದಾರೆ. ತಮಗೆ ಶಾಶ್ವತ ಸೂರು ಒದಗಿಸಿ ಕೊಡುವವರೆಗೂ ಪರಿಹಾರ ಕೇಂದ್ರವನ್ನು ತೊರೆಯುವದಿಲ್ಲವೆಂದು ಪಟ್ಟು ಹಿಡಿದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿಲ್ಲಾ ಉಪವಿಭಾಗ ಅಧಿಕಾರಿ ಜವರೇಗೌಡ ಅಧ್ಯಕ್ಷತೆಯಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಲು ಸಮಿತಿಯೊಂದನ್ನು ರಚಿಸಿದರು. ಸಮಿತಿಯ ವತಿಯಿಂದ ಕಳೆದ ಕೆಲವು ತಿಂಗಳ ಹಿಂದೆ ನೆಲ್ಯಹುದಿಕೇರಿ ಹಾಗೂ ಅಭ್ಯತ್ ಮಂಗಲ ಗ್ರಾಮಕ್ಕೆ ಸೇರಿರುವ ಅರೆಕಾಡು ರಸ್ತೆಯಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಒತ್ತುವರಿ ಜಾಗವನ್ನು ತೆರವುಗೊಳಿಸಿ ಜಾಗವನ್ನು ಗುರುತಿಸಲಾಯಿತು. ಆದರೆ ಜಿಲ್ಲಾಡಳಿತದ ವಿರುದ್ಧ ಒತ್ತುವರಿದಾರ ಮಾಲೀಕರು ತಾತ್ಕಾಲಿಕ ತಡೆಯಾಜ್ಞೆಯನ್ನು ತಂದಿದ್ದರು. ಇದರ ವಿರುದ್ಧ ಜಿಲ್ಲಾಡಳಿತವು ಕೂಡ ತ್ವರಿತ ಗತಿಯಲ್ಲಿ ನ್ಯಾಯಾಲಯ ಹಾಗೂ ಭೂಕಬಳಿಕೆ ನ್ಯಾಯಮಂಡಳಿಯ ಮುಖಾಂತರ ಕ್ರಮಬದ್ಧವಾಗಿ ಕಾನೂನು ರೀತಿಯಲ್ಲಿ ಪ್ರಕ್ರಿಯೆ ನಡೆಸಿದ್ದು, ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯಲು ಇದೀಗ ಮುಂದಾಗಿದೆ. ತೆರವು ಕಾರ್ಯ ಬಿಗಿ ಪೊಲೀಸ್ ಬಂದುಬಸ್ತ್‍ನಲ್ಲಿ ನಡೆ ಯಲಿದ್ದು ಅದೇ ರೀತಿ ನೆಲ್ಯಹುದಿಕೇರಿ ಯಲ್ಲಿ ಈ ಹಿಂದೆ ಗುರುತಿಸಿರುವ ಜಾಗದಲ್ಲಿ ಕೂಡಾ ಸರ್ವೆ ಕಾರ್ಯ ನಡೆಯಲಿದೆ. -ವಾಸು