ಕಣಿವೆ, ನ. 29: ಕಳೆದ ಎರಡೂವರೆ ದಶಕಗಳ ಈಚೆಗೆ ಹಣದ ಬೆಳೆ ಎಂದೇ ಪ್ರಚಲಿತದಲ್ಲಿರುವ ಶುಂಠಿ ಬೆಳೆ ಬೆಳೆಯಲು, ಈ ಬಾರಿಯೂ ಬಹಳಷ್ಟು ಮಂದಿ ಉತ್ಸುಕತೆ ತೋರುತ್ತಿದ್ದಾರೆ. ಪ್ರತೀ ವರ್ಷದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಶುಂಠಿ ಬಿತ್ತನೆ ಮಾಡಲಾಗುತ್ತದೆ. ಕಳೆದ ವರ್ಷದ ಬಿತ್ತನೆ ಅವಧಿಯಲ್ಲಿ 60 ಕೆ.ಜಿ. ತೂಕದ ಶುಂಠಿ ಬಿತ್ತನೆಯ ಒಂದು ಚೀಲ ಬೀಜಕ್ಕೆ ರೂ. 5 ಸಾವಿರಗಳಿತ್ತು. ಆದರೂ ಕೂಡ ಏರಿಕೆಯಾದ ಬಿತ್ತನೆ ಬೀಜದ ದರ ಲೆಕ್ಕಿಸದೇ ಬಹಳಷ್ಟು ಮಂದಿ ಶುಂಠಿ ಬೆಳೆಗೆ ಮುಂದಾಗಿದ್ದರು. ಹಾಗೆಯೇ ಬೆಳೆಗಾರರು ಬೆಳೆದ ಶುಂಠಿ ಫಸಲಿಗೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಅಗಷ್ಟೇ ಕಿತ್ತುಕೊಟ್ಟ ಹೊಸ ಶುಂಠಿ ಫಸಲಿನ 60 ಕೆ.ಜಿ. ತೂಕದ ಒಂದು ಚೀಲಕ್ಕೆ ಮಾರುಕಟ್ಟೆಯಲ್ಲಿ ಬೆಳೆಗಾರರು ಕನಸಿನಲ್ಲಿಯೂ ಊಹಿಸದ ದರ ಸಿಕ್ಕತೊಡಗಿತು. ಅಂದರೆ ಒಂದು ಚೀಲ ಶುಂಠಿಗೆ ಬರೋಬ್ಬರಿ ಐದು ಸಾವಿರದಿಂದ ಐದೂವರೆ ಸಾವಿರ ರೂಪಾಯಿ ದರ ಸಿಕ್ಕಿತ್ತು. ಈ ದರ ಬಹಳ ದಿನ ಉಳಿಯಲಿಲ್ಲ. ಕ್ರಮೇಣ ಎರಡು ಸಾವಿರ ರೂಪಾಯಿಗಳವರೆಗೆ ಬಂದಿತ್ತು. ನಂತರದ ದಿನಗಳಲ್ಲಿ ಏರಿಕೆ ಕಂಡು ಇದೀಗ ರೂ. 2.850 ಗಳಿಗೆ ಸ್ಥಿರತೆ ಕಂಡುಕೊಂಡಿದೆ. ಮುಂದಿನ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಈ ದರ ಮತ್ತಷ್ಟು ಜಿಗಿಯುವ ಸಂಭವವನ್ನು ಶುಂಠಿ ಮಾರಾಟಗಾರರು ಮತ್ತು ಬಹಳಷ್ಟು ವರ್ಷಗಳಿಂದ ಶುಂಠಿ ಬೆಳೆಯುತ್ತಿರುವ ಬೆಳೆಗಾರರು ಭವಿಷ್ಯ ನುಡಿದಿದ್ದಾರೆ. ಹಾಗಾಗಿ ಈ ವರ್ಷವೂ ಕಳೆದ ವರ್ಷದ ಮಾದರಿಯಲ್ಲಿಯೇ ಅವಧಿ ಪೂರೈಸಿದ ಮಾಗಿದ ಶುಂಠಿ ಬಿತ್ತನೆ ಬೀಜಕ್ಕೆ ಈ ಬಾರಿಯೂ ಐದರಿಂದ ಐದೂವರೆ ಸಾವಿರ ನಿಲ್ಲುತ್ತದೆ. ಒಂದು ವೇಳೆ ಐದೂವರೆ ಸಾವಿರ ರೂಪಾಯಿಗಳಿಂದ ಜಿಗಿದರೂ ಆಶ್ಚರ್ಯ ಪಡಬೇಕಿಲ್ಲ ಎಂಬ ಚರ್ಚೆಗಳು ಬೆಳೆಗಾರರಿಂದ ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಬಹಳಷ್ಟು ಮಂದಿ ಬೆಳೆಗಾರರು ಈಗಾಗಲೇ ಮುಂಗಡವಾಗಿ ಗುಣಮಟ್ಡದ ಶುಂಠಿ ಬಿತ್ತನೆ ಬೀಜವನ್ನು ನಾಲ್ಕು ಸಾವಿರದ ಎಂಟುನೂರು, ಐದು ಸಾವಿರ ಹಾಗೂ ಐದು ಸಾವಿರದ ಎರಡು ನೂರುಗಳಿಗೆ ಮುಂಗಡವಾಗಿ ಕಾಯ್ದಿರಿಸುತ್ತಿರುವ ಮಾಹಿತಿಗಳು ಕೇಳಿ ಬರುತ್ತಿವೆ. ಅದೃಷ್ಡದ ಬೆಳೆಯೆಂದೇ ಕರೆಯುವ ಈ ಶುಂಠಿ ಕೃಷಿಗೆ ಈ ಬಾರಿ ಕೈ ಹಾಕದವರೇ ಇಲ್ಲವೇನೋ ಎಂಬಂತೆ ಬಹಳಷ್ಟು ಮಂದಿ ಭೂಮಿ ಹಾಗೂ ಶುಂಠಿಯ ಬಿತ್ತನೆ ಬೀಜದ ಹುಡುಕಾಟ ಆರಂಭಿಸಿದ್ದಾರೆ. ಕಳೆದ ವರ್ಷ ಒಂದು ಎಕರೆ ನೀರಾವರಿ ಭೂಮಿಗೆ 30 ರಿಂದ 35 ಸಾವಿರ ಇತ್ತು. ಆದರೆ ಬೆಳೆಗಾರರು ಬೆಳೆದ ಶುಂಠಿಗೆ ಈ ಬಾರಿ ಉತ್ತಮ ದರ ದೊರೆತ ಕಾರಣದಿಂದ ಮುಂದಿನ ಹಂಗಾಮಿಗೆ ಬಿತ್ತನೆ ಮಾಡಲು ಯೋಜಿಸಿರುವ ಶುಂಠಿ ಜಾಗಕ್ಕೆ ಒಂದು ಎಕರೆಗೆ ಒಂದು ವರ್ಷದ ಗೇಣಿಗೆ 45 ರಿಂದ 50 ಸಾವಿರ ರೂಗಳವರೆಗೂ ಬಿಕರಿಯಾಗಿದ್ದು, ಎಲ್ಲರಲ್ಲೂ ಶುಂಠಿಯ ಮೋಹ ಅಂಟಿಕೊಂಡು ಬಿಟ್ಟಿದೆ. ಹೀಗಾಗಿ ಮುಂದಿನ ಬಾರಿಗೆ ಶುಂಠಿಯ ದರ ಏನಾಗಲಿದೆಯೋ ದೇವರೇ ಬಲ್ಲ ಎಂದು ಹತ್ತು ಎಕರೆಯಲ್ಲಿ ಬೆಳೆಯುತ್ತಿದ್ದವರು ಈಗ ಅಯ್ಯೋ ನೋಡೋಣ ಇರಿ. ಈ ಬಾರೀ ದರ ಹೇಳೋಕಾಗಲ್ಲ. ಒಂದು ಎಕರೆಯಲ್ಲಿ ಶುಂಠಿ ಬೆಳೆಯಲು ಕನಿಷ್ಟ ಎಂದರೂ ಮೂರುವರೆಯಿಂದ ನಾಲ್ಕು ಲಕ್ಷ ಹಣ ಬೇಕು. ಈ ಬಾರೀ ಕೇವಲ ಎರಡೇ ಎಕರೆ ಸಾಕು ಎನ್ನುತ್ತಾರೆ ಕಳೆದ ಮುವತ್ತು ವರ್ಷಗಳಿಂದ ಶುಂಠಿ ಬೆಳೆಯುತ್ತಿರುವ ಕುಶಾಲನಗರದ ರಾಯ್. - ಕೆ.ಎಸ್. ಮೂರ್ತಿ