ಚೆಟ್ಟಳ್ಳಿ, ನ. 29: ನಮ್ಮ ಸಮಾಜ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ವೀರಾಜಪೇಟೆ ನಗರ ಸಬ್ ಇನ್ಸ್ಪೆಕ್ಟರ್ ಮರಿಸ್ವಾಮಿ ಹೇಳಿದರು. ವೀರಾಜಪೇಟೆ ಅನ್ವಾರುಲ್ ಹುದಾ ವತಿಯಿಂದ ಪ್ರವಾದಿ ಪೈಗಂಬರ್ (ಸ) ಅವರ 1494ನೇ ಜನ್ಮದಿನದ ಅಂಗವಾಗಿ ನಡೆದ “ಹುಬ್ಬುನ್ನಬಿ” ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಮರಿಸ್ವಾಮಿ ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕು ಎಂದು ಮರಿಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕಿತ್ತಲೆ ನಾಡು ವಾರಪತ್ರಿಕೆಯ ಸಂಪಾದಕ ಕೂವಂಡ ಹಂಸತುಲ್ಲಾ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಪ್ರಗತಿ ಸಾಧ್ಯ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಸಾಧನೆಗೈಯ್ಯಬೇಕೆಂದರೆ ಶಿಕ್ಷಣ ಮುಖ್ಯವಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಎಲ್ಲಾ ವಿದ್ಯಾರ್ಥಿಗಳಲ್ಲಿ ಒಂದಲ್ಲಾ ಒಂದು, ವಿಶೇಷ ಪ್ರತಿಭೆಗಳು ಅಡಕವಾಗಿದೆ.
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವಂತಾಗಬೇಕು ಎಂದರು. ಕಳೆದ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹೈಮನ ಕಲಾ ಉತ್ಸವದ ಮೂಲಕ ಉತ್ತಮ ವೇದಿಕೆಯನ್ನು ಅನ್ವಾರುಲ್ ಹುದಾ ಕಲ್ಪಿಸಿಕೊಡುತ್ತಿದೆ, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ಇಸ್ಮಾಯಿಲ್ ಹೇಳಿದರು.
ವೇದಿಕೆಯಲ್ಲಿ ಅನ್ವಾರುಲ್ ಹುದಾ ಮುಖ್ಯಸ್ಥರಾದ ಶೈಖುನಾ ಅಹ್ಸನಿ ಉಸ್ತಾದ್, ವೀರಾಜಪೇಟೆ ಪಟ್ಟಣ ಪಂಚಾಯತಿ ಸದಸ್ಯ ಮೊಹಮ್ಮದ್ ರಫಿ, ವಕೀಲ ಯೂಸುಫ್ ಕಡಂಗ ಇದ್ದರು. ಇಬ್ರಾಹಿಂ ಮಾಸ್ಟರ್ ಸ್ವಾಗತಿಸಿ, ಶಾಫಿ ಅನ್ವಾರಿ ವಂದಿಸಿದರು.