ಸುಂಟಿಕೊಪ್ಪ, ನ.29 : 50 ವರ್ಷ ಗಳಿಂದ ಖಾಸಗಿ ವ್ಯಕ್ತಿಯೊಬ್ಬರು ಸ್ವಾಧೀನ ಪಡಿಸಿಕೊಂಡಿದ್ದ ಸಾರ್ವಜನಿಕ ಕಾಲು ರಸ್ತೆಯನ್ನು ತಹಶೀಲ್ದಾರ್ ಗೋವಿಂದರಾಜು ಅವರು ಶುಕ್ರವಾರ ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಟ್ಟರು.
ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಿಬಾಣೆಯ ಸರ್ವೆನಂ 182 ರಲ್ಲಿ 500 ಮೀಟರ್ ಕಾಲು ರಸ್ತೆಯನ್ನು ನಿವೃತ್ತ ಕರ್ನಲ್ ಕೆ.ಜಿ.ಉತ್ತಯ್ಯ ಅವರು ಸ್ವಾಧೀನ ಪಡಿಸಿಕೊಂಡು ತಮ್ಮ ಸ್ವಂತ ಜಾಗದ ಕಾಫಿ ತೋಟದೊಳಗೆ ಸೇರಿಸಿಕೊಂಡಿದ್ದರು. ಸ್ಥಳೀಯರಾದ ಕೆ.ಎ. ತಿಮ್ಮಯ್ಯ, ಬಿ.ಟಿ.ಪುರುಷೋತ್ತಮ, ಗ್ರಾ.ಪಂ.ಅಧ್ಯಕ್ಷರು ಸ್ಥಳೀಯರು ಜನರಿಗೆ ಉಪಯೋಗವಾಗುವ ಈ 500 ಮೀಟರ್ ಕಾಲು ರಸ್ತೆಯನ್ನು ತೆರವುಗೊಳಿಸಲು ದಶಕಗಳಿಂದ ಆಗ್ರಹಿಸುತ್ತಾ ಬಂದಿದ್ದರು.
ಇದೀಗ ತಹಶೀಲ್ದಾರ್ ಗೋವಿಂದರಾಜು ಸುಂಟಿಕೊಪ್ಪ ನಾಡಕಚೇರಿಯ ಕಂದಾಯ ಪರಿವೀಕ್ಷಕ ಶಿವಪ್ಪ, ಸರ್ವೆ ಅಧಿಕಾರಿ ಕಿಶೋರ್ ಪಾಟೀಲ್, ಗ್ರಾಮಲೆಕ್ಕಿಗರಾದ ನಸೀಮ, ಗ್ರಾಮ ಸಹಾಯಕ ಶಿವಪ್ಪ, ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಕೆ.ಬಿ.ಕೃಷ್ಣ ಹಾಗೂ 7ನೇ ಹೊಸಕೋಟೆ ಗ್ರಾ.ಪಂ. ಸದಸ್ಯ ಅವಲಕುಟ್ಟಿ ಅವರುಗಳು ಸರ್ವೇ ನಡೆಸಿ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಲು ಅವಕಾಶ ಕಲ್ಪಿಸಿದರು. ವಿವಿಧ ತೋಟಗಳ ಕಾಫಿ ಬೆಳೆಗಾರರು ಹಾಗೂ ಗ್ರಾಮಸ್ಥರು ಇದ್ದರು.