ಸೋಮವಾರಪೇಟೆ, ನ. 29: ಮಡಿಕೇರಿ ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ, ಕಾವೇರಿ ಮಾತಾ ಮಹಿಳಾ ಒಕ್ಕೂಟ ಹಾಗೂ ತೋಳೂರುಶೆಟ್ಟಳ್ಳಿ ಯುವತಿ ಮಂಡಳಿ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇನಕನಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ಮಕ್ಕಳು ಗ್ರಾಮೀಣ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಪೋಷಕರು ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ತುಂಬುವದರೊಂದಿಗೆ ಅವರಲ್ಲಿರುವ ಉತ್ತಮ ಪ್ರತಿಭೆ ಹೊರತಂದರೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧಿಸುತ್ತಾರೆ ಎಂದರು

ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಕೇರಿ-ಬಿ ತಂಡ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಸಿದ್ದಲಿಂಗಪುರದ ಜಿ ಕಿಂಗ್ ತಂಡ ಪಡೆಯಿತು. ಥ್ರೋಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಹಾನಗಲ್ ಶೆಟ್ಟಳ್ಳಿಯ ಸರಸ್ವತಿ ಯುವತಿ ಮಂಡಳಿ ಪಡೆದರೆ, ದ್ವಿತೀಯ ಸ್ಥಾನವನ್ನು ತೋಳೂರು ಶೆಟ್ಟಳ್ಳಿಯ ಕಾವೇರಿ ಮಾತಾ ಯುವತಿ ಮಂಡಳಿ-ಬಿ ತಂಡ ಪಡೆಯಿತು.

ನಂತರ ನಡೆದ ಪುರುಷರ ಹಗ್ಗ ಜಗ್ಗಾಟ ಪಂದ್ಯದಲ್ಲಿ ತಾಕೇರಿ ಪ್ರಥಮ, ತೋಳೂರು ಶೆಟ್ಟಳ್ಳಿ ದ್ವಿತೀಯ ಸ್ಥಾನ ಪಡೆಯಿತು. ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಹಲವು ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.

ಈ ಸಂದರ್ಭ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯ ಧರ್ಮಪ್ಪ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಉಮೇಶ್, ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಮ್ಮ ಶಿವಕುಮಾರ್, ಸೋಮವಾರಪೇಟೆ ಆಟೋ ಚಾಲಕರ ಸಂಘದ ಕಾರ್ಯದರ್ಶಿ ಗಂಗಾಧರ್, ತಾಲೂಕು ಯುವ ಒಕ್ಕೂಟದ ಕಾರ್ಯದರ್ಶಿ ಆದರ್ಶ್, ತೀರ್ಪುಗಾರ ವಿಠಲ್, ರಂಜನ್, ಸುರೇಶ್ ಸೇರಿದಂತೆ ಮಹಿಳಾ ಒಕ್ಕೂಟ ಮತ್ತು ಮಂಡಳಿಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.