ಶನಿವಾರಸಂತೆ, ನ. 29: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಿಲುವಾಗಿಲು-ಬೆಸೂರು ಅವಳಿ ಗ್ರಾಮದ ಶ್ರೀ ಕ್ಷೇತ್ರ ತ್ರಿಪುರ ಸುಂದರಿ ದೇವಾಲಯದಲ್ಲಿ ಶ್ರೀ ಬಾಲತ್ರಿಪುರ ಸುಂದರಿ ಅಮ್ಮನವರ 7ನೇ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ದಕ್ಷಿಣ ಭಾರತದಲ್ಲೇ ಏಕೈಕ ದೇವಾಲಯವೆನಿಸಿರುವ ಶ್ರೀ ಕ್ಷೇತ್ರದಲ್ಲಿ ಅದಿದೇವತೆ ಬಾಲತ್ರಿಪುರ ಸುಂದರಿ ಅಮ್ಮನವರು, ದೇವಾಲಯ ಆವರಣದಲ್ಲಿ ಗರ್ಭಗುಡಿಯ ಹಿಂಭಾಗ ಶ್ರೀ ಈಶ್ವರ ದೇವಾಲಯ, ಶ್ರೀ ಗಣಪತಿ ದೇವಾಲಯವಿದೆ. ಮುಖ್ಯ ದೇವಾಲಯದ ಕೆಳ ಭಾಗದಲ್ಲಿ ಅಮ್ಮನವರ ಮೂಲಪೀಠದ ದೇವಾಲಯ, ಶ್ರೀ ಮುನೇಶ್ವರ, ಶ್ರೀ ಚೌಡೇಶ್ವರಿ, ಶ್ರೀ ನಾಗದೇವತೆ 6 ದೇವಾಲಯಗಳಲ್ಲಿ ಪೂಜಾ, ಕೈಂಕರ್ಯಗಳು ಅರ್ಚಕರಾದ ದರ್ಶನ್ ಮತ್ತು ಸುನಿಲ್ ಅವರ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಆರಂಭವಾದವು.
ನಿರ್ಮಲ ದರ್ಶನ, ಮಂಗಳಾರತಿ, ಗಣಹೋಮ ಪೂಜೆಗಳು ನೆರವೇರಿದವು. ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗವಾಯಿತು. ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ದೀಪಾರಾಧನೆ, ಮಹಾ ಮಂಗಳಾರತಿ ನೆರವೇರಿತು. ನಿಲುವಾಗಿಲು, ಬೆಸೂರು, ಕೊಡ್ಲಿಪೇಟೆ, ಶನಿವಾರಸಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಯೋಧ ಸಿ.ಬಿ. ಪ್ರಸನ್ನ, ಕಾರ್ಯನಿರ್ವಹಣಾ ಸಮಿತಿ ಪದಾಧಿಕಾರಿಗಳಾದ ಹೆಚ್.ಬಿ. ಹರೀಶ್, ಎ.ಎಸ್. ರೇಣುಕ, ಎನ್.ಎಸ್. ರಾಜಶೇಖರ್, ಬಾಬು ರಾಜೇಂದ್ರ ಪ್ರಸಾದ್, ಕೆ.ಬಿ. ವೀರಭದ್ರಪ್ಪ, ಸದಸ್ಯರು ಹಾಜರಿದ್ದರು.