ಮಡಿಕೇರಿ, ನ.29 : ಜಿಲ್ಲೆÉಯಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ಹೆಚ್ಐವಿ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಪ್ರಸ್ತುತ ಶೇ.0.5 ರಷ್ಟು ಸೋಂಕಿತರು ಇದ್ದಾರೆ. ಈ ರೋಗಕ್ಕೆ ಇದುವರೆಗೆ 415 ಮಂದಿ ಬಲಿಯಾಗಿದ್ದಾರೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008 ರಲ್ಲಿ ಸಾಮಾನ್ಯರಲ್ಲಿ ಶೇ. 4 ರಷ್ಟಿದ್ದ ಹೆಚ್ಐವಿ ಸೋಂಕಿತರ ಪ್ರಮಾಣ
(ಮೊದಲ ಪುಟದಿಂದ) ಪ್ರಸಕ್ತ ಸಾಲಿನಲ್ಲಿ ಶೇ.0.4 ಕ್ಕೆ ಇಳಿದಿದ್ದರೆ, ಗರ್ಭಿಣಿಯರಲ್ಲಿ 0.28 ರಷ್ಟಿದ್ದ ಪ್ರಮಾಣ ಇದೀಗ 0.06 ಕ್ಕೆ ಇಳಿಕೆಯಾಗಿದೆಯೆಂದು ಮಾಹಿತಿ ನೀಡಿದರು.ಕೊಡಗು ಜಿಲ್ಲೆಯಲ್ಲಿ ಹೆಚ್ಐವಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ 2009 ರಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಎಆರ್ಟಿ ಕೇಂದ್ರವನ್ನು ಆರಂಭಿಸಲಾಗಿದ್ದು, ಇದುವರೆಗೆ ಈ ಕೇಂದ್ರದಲ್ಲಿ 2095 ಹೆಚ್ಐವಿ ಸೋಂಕಿತರು ನೋಂದಾಯಿಸಲ್ಪಟ್ಟಿದ್ದು, ಪ್ರಸಕ್ತ 1687 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ 7 ಇಐಡಿಪಿ ಪರೀಕ್ಷಾ ಕೇಂದ್ರಗಳಿದ್ದು, ಹೆಚ್ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಶಿಶುವಿನ ಶೀಘ್ರ ತಪಾಸಣಾ ಕೇಂದ್ರಗಳಲ್ಲಿ 2011 ರಿಂದ ಹೆಚ್ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಮಕ್ಕಳಲ್ಲಿ 6 ವಾರದಿಂದ 18 ತಿಂಗಳ ವರೆಗಿನ 109 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ 5 ಮಕ್ಕಳಿಗೆ ಸೋಂಕು ತಗುಲಿರುವದು ಕಂಡು ಬಂದಿದೆ.
415 ಮಂದಿಯ ಸಾವು: ಏಡ್ಸ್ ನಿಯಂತ್ರಣ ಕಾರ್ಯಕ್ರಮ ಆರಂಭವಾದಲ್ಲಿಂದ ಇಲ್ಲಿಯವರೆಗೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಐವಿ ಸೋಂಕಿಗೆ ಒಳಗಾದವರಲ್ಲಿ ಒಟ್ಟು 415 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 284 ಮಂದಿ ಪುರುಷರು, 127 ಮಹಿಳೆಯರು ಹಾಗೂ 4 ಮಕ್ಕಳು ಸೇರಿದ್ದಾರೆ. ಕಳೆದ 2018-19 ನೇ ಸಾಲಿನಲ್ಲಿ ಒಟ್ಟು 64 ಮಂದಿ ಸಾವಿಗೀಡಾಗಿದ್ದಾರೆಂದು ಪ್ರಶ್ನೆಯೊಂದಕ್ಕೆ ಡಾ.ಆನಂದ್ ಉತ್ತರಿಸಿದರು.