ಮಡಿಕೇರಿ, ನ. 28: ವಸತಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡದಿದ್ದಲ್ಲಿ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಸತಿ ಯೋಜನೆಗಳ ದಾಖಲಾತಿಗಳನ್ನು ತುರ್ತಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಂಜೆಯೊಳಗೆ ತಲುಪಿಸುವಂತೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅತಿವೃಷ್ಟಿಯಿಂದ ಹಾನಿಗೊ¼ Àಗಾದ ಬೆಳೆಗಳ ಬೆಳೆ ಪರಿಹಾರದ ವಿವರದ ಪ್ರಗತಿ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು ಅವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು ಬಾಕಿ ಉಳಿದಿರುವ ಬೆಳೆ ಪರಿಹಾರವನ್ನು ಒಂದು ವಾರದೊಳಗೆ ವಿತರಿಸುವಂತೆ ಸೂಚಿಸಿದರು.

ಜಿಲ್ಲೆಯ ವಿವಿಧೆಡೆ ತೋಟಗಾರಿಕೆ ಇಲಾಖೆಗೆ ಅವಶ್ಯವಿರುವ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಿ ಹಾಗೂ ಭಾಗಮಂಡಲದಲ್ಲಿ ಕೃಷಿ ಇಲಾಖೆಗೆ ಅವಶ್ಯವಿರುವ ಜಾಗವನ್ನು ಕೃಷಿ ಇಲಾಖೆಯ ಹೆಸರಿಗೆ ಅರ್‍ಟಿಸಿ ಮಂಜೂರು ಮಾಡಲು ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ಅವರು ಜಿಲ್ಲೆಯಲ್ಲಿನ 83 ಅಂಗನವಾಡಿಗಳಿಗೆ ಸ್ವಂತ ನಿವೇಶನದ ಅವಶ್ಯಕತೆಯಿದ್ದು, ಇದರಲ್ಲಿ 30 ಅಂಗನವಾಡಿಗಳಿಗೆ ನಿವೇಶನ ಗುರುತಿಸಿದ್ದು, ಬಾಕಿ ಉಳಿದಿರುವ 53 ಅಂಗನವಾಡಿಗಳಿಗೆ ಜಾಗದ ಅವಶ್ಯಕತೆ ಇರುವದಾಗಿ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಸರ್ಕಾರಿ ನಿವೇಶನ ಲಭ್ಯವಿರದ ಕಡೆ ಕಂದಾಯ ಅಧಿಕಾರಿಗಳು ಹಿಂಬರಹ ನೀಡಬೇಕು. ಹಾಗೂ ಅರಣ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಇರುವಂತಹ ಅಂಗನವಾಡಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸ್ಥಳ ಪರೀಶಿಲನೆ ನಡೆಸಿ ಸರ್ಕಾರಿ ನಿವೇಶನ ಲಭ್ಯವಿಲ್ಲದಲ್ಲಿ ಖಾಸಗಿ ನಿವೇಶನ ಖರೀದಿ ಹಾಗೂ ದಾನಿಗಳು ಮುಂದೆ ಬಂದಲ್ಲಿ ಅಂತಹವರಿಂದ ನಿವೇಶನ ಪಡೆದು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

ವೀರಾಜಪೇಟೆ ನ್ಯಾಯಾಲಯಕ್ಕೆ ಮಂಜೂರಾಗಿರುವ ಜಾಗವನ್ನು ಆರ್‍ಟಿಸಿಯಲ್ಲಿ ನೋಂದಾಯಿಸಿ ಹಸ್ತಾಂತರಿಸಲು ಸೂಕ್ತ ಕ್ರಮವಹಿಸು ವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸ್ಮಶಾನ, ವಿದ್ಯಾರ್ಥಿ ನಿಲಯಗಳು, ಸಮುದಾಯ ಭವನಗಳು ಹಾಗೂ ಕಸ ವಿಲೇವಾರಿಗೆ ಅಗತ್ಯವಿರುವ ಜಾಗವನ್ನು ಆದ್ಯತೆ ಮೇರಗೆ ಗುರುತಿಸಿ ಸರ್ವೆ ಮಾಡಿ ಸಂಬಂಧಪಟ್ಟ ಇಲಾಖೆಗಳ ಸುರ್ಪದಿಗೆ ನೀಡುವಂತೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲಾರ್‍ಗಳಿಗೆ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ, ತಹಶೀಲ್ದಾರ್ ಗೋವಿಂದರಾಜು, ಮಹೇಶ್, ಕಂದಾಯ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.