ಕೂಡಿಗೆ, ನ. 28: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಸೀಗೆಹೊಸೂರು ಮತ್ತು ಚಿಕ್ಕತ್ತೂರು, ದೊಡ್ಡತ್ತೂರು ವ್ಯಾಪ್ತಿಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ಕಾಡಾನೆಗಳ ದಾಂಧಲೆಗೆ ಈ ವ್ಯಾಪ್ತಿಯ ರೈತರು ಬೇಸತ್ತು ಸಂಕಷ್ಟಕ್ಕೀಡಾಗಿದ್ದಾರೆ.

ಕಟಾವಿಗೆ ಬಂದಿರುವ ಭತ್ತದ ಬೆಳೆಯನ್ನು ಹಾನಿಗೊಳಿಸಿರುವ ಕಾಡಾನೆಗಳು, ರೈತರ ಬೆಳೆಯನ್ನು ನಷ್ಟಪಡಿಸಿವೆ.

ಸೀಗೆಹೊಸೂರಿನ ಚಿಣ್ಣಪ್ಪ ಎಂಬವರ ಮೂರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಸಿಹಿಗೆಣಸು, ಕೇನೆ, ಭತ್ತದ ಬೆಳೆಯನ್ನು ನಾಶಪಡಿಸಿರುವದಲ್ಲದೆ, ಅಲ್ಲಿ ಅಳವಡಿಸಿದ್ದ ಪೈಪ್‍ಗಳನ್ನು ಸಹ ಹಾನಿಗೊಳಿಸಿ ಬಹಳ ನಷ್ಟಪಡಿಸಿವೆ. ಅಲ್ಲದೆ, ನಾಗರಾಜು, ರಾಜಣ್ಣ, ದೇವರಾಜು, ಜಗದೀಶ್ ಎಂಬವರ ಜಮೀನಿನಲ್ಲಿಯೂ ಸಹ ಬೆಳೆ ನಷ್ಟಪಡಿಸಿವೆ.

ಕುಶಾಲನಗರ ವಲಯದ ಬೆಂಡೆಬೆಟ್ಟ ಕಾಡಂಚಿನಿಂದ ಕಂದಕಗಳನ್ನು ದಾಟಿ ಚಿಕ್ಕತ್ತೂರು, ದೊಡ್ಡತ್ತೂರು, ಹಾರಂಗಿ ಸಮೀಪದ ಗ್ರಾಮಗಳತ್ತ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು, ಅಲ್ಲಿನ ಉದಯ, ಪ್ರಕಾಶ, ಸುರೇಶ, ಅಪ್ಪಾಜಿ ಮತ್ತಿತರರ ರೈತರ ಜಮೀನುಗಳ ಬೆಳೆಗಳನ್ನು ನಾಶಪಡಿಸಿವೆ.

ಕಾಡಾನೆಗಳಿಂದ ಆಗುತ್ತಿರುವ ಬೆಳೆನಷ್ಟದಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಸಂಪೂರ್ಣ ನಷ್ಟಕ್ಕೀಡಾಗಿದ್ದಾರೆ. ಕಾಡಾನೆಗಳ ಹಾವಳಿಯನ್ನು ತಪ್ಪಿಸುವಲ್ಲಿ ಅರಣ್ಯ ಇಲಾಖೆಯವರು ಮುಂದಾಗಿ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.