ಜಿಲ್ಲಾಧಿಕಾರಿ ಭರವಸೆ
ಮಡಿಕೇರಿ, ನ. 28: ತೀರಾ ಹದಗೆಟ್ಟಿರುವ ಮಡಿಕೇರಿ ನಗರದ ರಸ್ತೆಗಳ ಅಭಿವೃದ್ಧಿಗೆ ಡಿ. 15 ರ ನಂತರ ಚಾಲನೆ ನೀಡುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಮಡಿಕೇರಿ ರಕ್ಷಣಾ ವೇದಿಕೆಯ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.
ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಬಳಿಗೆ ನಿಯೋಗ ತೆರಳಿದ ವೇದಿಕೆಯ ಪ್ರಮುಖರು ರಸ್ತೆ ಅವ್ಯವಸ್ಥೆ, ಸ್ಟೋನ್ಹಿಲ್ ಬಳಿಯ ಕಸದ ರಾಶಿಯ ಸಮಸ್ಯೆ, ಬೀದಿನಾಯಿಗಳು ಮತ್ತು ಬೀಡಾಡಿ ಜಾನುವಾರುಗಳ ಹಾವಳಿ ಬಗ್ಗೆ ಗಮನ ಸೆಳೆಯಲಾಯಿತು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಡಿ. 15 ರಿಂದ ಆರಂಭಗೊಳ್ಳುವ ರಸ್ತೆ ಕಾಮಗಾರಿ ಮೇ 31 ರೊಳಗೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿರುವದಾಗಿ ತಿಳಿಸಿದರು.
ಕಳೆದ 20 ವರ್ಷಗಳಿಂದ ಸ್ಟೋನ್ ಹಿಲ್ ಬಳಿಯ ಕಸದ ಸಮಸ್ಯೆ ಹಾಗೇ ಉಳಿದುಕೊಂಡಿದೆ. ಇದಕ್ಕೆ ತಕ್ಷಣ ಪರಿಹಾರ ಸೂಚಿಸುವದು ಕಷ್ಟ ಸಾಧ್ಯ, ಅಲ್ಲದೆ ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಪ್ರಕ್ರಿಯೆ ನಡೆಸಬೇಕಾಗಿದ್ದು, ಸಂಘ-ಸಂಸ್ಥೆಗಳ ಸಹಕಾರದ ಅಗತ್ಯವಿದೆ. ಬೀಡಾಡಿ ಜಾನುವಾರುಗಳನ್ನು ಪೊಲೀಸರ ಸಹಕಾರದಿಂದ ಸ್ಥಳಾಂತರಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಮತ್ತು ಮಡಿಕೇರಿ ರಕ್ಷಣಾ ವೇದಿಕೆಯ ಸಹಕಾರ ಕೋರಿದ್ದಾರೆ ಎಂದು ಪವನ್ ಪೆಮ್ಮಯ್ಯ ಹೇಳಿದರು.
ನಿಯೋಗದಲ್ಲಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ಬಿ.ಎಂ. ಹರೀಶ್, ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ, ಖಜಾಂಚಿ ಉಮೇಶ್ ಕುಮಾರ್, ನಿರ್ದೇಶಕ ದಿನೇಶ್ ನಾಯರ್, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ ಮತ್ತಿತರ ಪ್ರಮುಖರು ಹಾಜರಿದ್ದರು.