ಸಿದ್ದಾಪುರ, ನ. 28: ಕಾಡಾನೆಗಳ ಹಾವಳಿಯಿಂದ ಭತ್ತದ ಕೃಷಿ ಹಾಗೂ ಕಾಫಿ ಫಸಲುಗಳು ನಾಶಗೊಂಡಿರುವ ಘಟನೆ ಕಣ್ಣಂಗಾಲ ಹಾಗೂ ಕಳತ್ಮಾಡು ಗ್ರಾಮಗಳಲ್ಲಿ ನಡೆದಿದೆ. ಕಣ್ಣಂಗಾಲ ಗ್ರಾಮದ ಹಚ್ಚಿನಾಡು ಗ್ರಾಮದಲ್ಲಿ ಹಾಗೂ ಯಡೂರು ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿವೆ.
ಈ ಹಿನ್ನೆಲೆಯಲ್ಲಿ ಫಸಲಿರುವ ಕಾಫಿ ಗಿಡಗಳು ನಾಶಗೊಂಡು ಬೆಳೆಗಾರರಿಗೆ ನಷ್ಟ ಸಂಭವಿಸುತ್ತಿದೆ. ಇದಲ್ಲದೆ ಯಡೂರು ಗ್ರಾಮದ ಬಲ್ಲಚಂಡ ತಿಮ್ಮಯ್ಯ ಎಂಬವರ ಭತ್ತದ ಗದ್ದೆಗೆ ಕಾಡಾನೆಗಳ ಹಿಂಡು ಲಗ್ಗೆಯಿಟ್ಟು ಪೈರುಗಳನ್ನು ನಾಶಗೊಳಿಸಿವೆ. ಇದರಿಂದಾಗಿ ಅಪಾರ ಪ್ರಮಾಣದ ಭತ್ತದ ಫಸಲುಗಳು ನಾಶಗೊಂಡಿವೆ. ಇದಲ್ಲದೇ ಕಳತ್ಮಾಡು ಗ್ರಾಮದ ಮಚ್ಚಾರಂಡ ಮುದ್ದೂಸ್ ಎಂಬವರ ಕಲ್ಪತರು ಕಾಫಿ ತೋಟದೊಳಗೆ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ ಪರಿಣಾಮ ಫಸಲಿರುವ ಕಾಫಿ ಗಿಡಗಳು ನಾಶವಾಗಿವೆ.
ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರಿಗೆ ಹಾಗೂ ಕೃಷಿಕರಿಗೆ ಇದೀಗ ಕಾಡಾನೆಗಳ ಹಾವಳಿಯಿಂದಾಗಿ ನೆಮ್ಮದಿ ಇಲ್ಲದಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈಗಾಗಲೇ ಕಾಫಿ ತೋಟಗಳಲ್ಲಿ ಕಾಫಿ ಹಣ್ಣಾಗಿದ್ದು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುವ ಕಾರ್ಮಿಕರು ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ಭಯ ಭೀತರಾಗಿದ್ದಾರೆ. -ವಾಸು