ಕೂಡಿಗೆ, ನ. 28: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿ ಉದ್ಘಾಟನೆಗೊಂಡಿರುವ ಬೃಂದಾವನ ವೀಕ್ಷಣೆಯ ಜೊತೆಗೆ ಸಂಜೆ ಸಂಗೀತ ಕಾರಂಜಿಯ ರಸದೌತಣವನ್ನು ನೀಡುತ್ತಿದ್ದು, ಸಂಗೀತ ಕಾರಂಜಿಯ ಎಲ್ಲಾ ಕಾಮಗಾರಿಗಳು ಸಂಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ವೀಕ್ಷಣೆಗೆ ಪ್ರವೇಶಕ್ಕೆ ಟಿಕೆಟ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗುತ್ತಿದೆ.
ಉದ್ಘಾಟನೆಗೊಂಡಾಗಿನಿಂದ ಉಚಿತವಾಗಿ ಅತ್ಯಾಧುನಿಕ ರೀತಿಯಲ್ಲಿ ಅರ್ಧ ಗಂಟೆವರೆಗೆ ನೀರಿನ ರಮಣೀಯ ಸಂಗೀತ ಕಾರಂಜಿಯ ದೃಶ್ಯವನ್ನು ನೋಡಲು ಸಾವಿರಾರು ಪ್ರವಾಸಿಗರು ಸಂಜೆವರೆಗೆ ಕಾದುಕುಳಿತು ಕಾರಂಜಿಯ ದೃಶ್ಯವನ್ನು ನೋಡಿ ಸಂತೋಷದಿಂದ ಹಿಂತಿರುಗುತ್ತಿದ್ದರು. ಆದರೆ, ಕೆಲವು ಕಾರಣಗಳಿಂದ ಮೇಲಾಧಿಕಾರಿಗಳ ಆದೇಶದಂತೆ ಪ್ರವಾಸಿಗರನ್ನು ಹಾರಂಗಿ ಜಲಾಶಯಕ್ಕೆ ತೆರಳಲು ಪ್ರವೇಶ ನಿರ್ಬಂಧ ಹೇರಲಾಗಿತ್ತು. ಆದ್ದರಿಂದ ಪ್ರವಾಸಿಗರು ನಿರಾಶರಾಗಿ ಹಿಂತಿರುಗುತ್ತಿರುವದು ಕಂಡುಬರುತ್ತಿತ್ತು. ಈಗಾಗಲೇ ಕೆಲವು ತಿಂಗಳುಗಳಿಂದ ಪ್ರವೇಶ ಪ್ರಾರಂಭವಾಗಿದ್ದು, ಜಿಲ್ಲೆಗೆ ಆಗಮಿಸುವ ಸಾವಿರಾರು ಪ್ರವಾಸಿಗರು ಹಾರಂಗಿ ಸಂಗೀತ ಕಾರಂಜಿ ವೀಕ್ಷಿಸುತ್ತಿದ್ದಾರೆ.
ಸಂಗೀತ ಕಾರಂಜಿಗೆ ಬೇಕಾಗುವ ಜನರೇಟರ್, ಟಿಕೆಟ್ ವ್ಯವಸ್ಥೆ, ವಾಹನಗಳ ನಿಲುಗಡೆ ವ್ಯವಸ್ಥೆ, ಬೃಂದಾವನಕ್ಕೆ ಇನ್ನೂ ಹೆಚ್ಚಿನ ಆಕರ್ಷಣೆಗೆ ಪ್ರಾಣಿಗಳ ಸ್ತಬ್ಧಚಿತ್ರಗಳನ್ನು ಅಳವಡಿಸಲಾಗಿದೆ. ಈಗಾಗಲೇ ದಿನಂಪ್ರತಿ ಸಾವಿರಾರು ಪ್ರವಾಸಿಗರು ಹಾರಂಗಿ ಬೃಂದಾವನಕ್ಕೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ. ನೀರಾವರಿ ನಿಗಮದ ಆದೇಶದನ್ವಯ ಸಂಗೀತ ಕಾರಂಜಿ ಕಾಮಗಾರಿಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಂಜೆ ಸಂಗೀತ ಕಾರಂಜಿ ವೀಕ್ಷಣೆಗೆ ಮುಂದಿನ ದಿನಗಳಲ್ಲಿ ಟಿಕೆಟ್ ವ್ಯವಸ್ಥೆ ಮಾಡಲು ಎಲ್ಲಾ ರೀತಿಯ ತಯಾರಿಯನ್ನು ಮಾಡಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್ ತಿಳಿಸಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ