ಮಡಿಕೇರಿ, ನ. 28: ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಇತ್ತೀಚಿನ ಕೆಲವು ದಿನಗಳಿಂದ ವನ್ಯಜೀವಿಗಳ ಉಪಟಳ ಹೆಚ್ಚಾಗುತ್ತಿದ್ದು; ಮಾನವ ಪ್ರಾಣ ಹಾನಿಯೊಂದಿಗೆ; ಜಾನುವಾರುಗಳೂ ಬಲಿಯಾಗುತ್ತಿವೆ. ದಕ್ಷಿಣ ಕೊಡಗಿನ ಒಂದಲ್ಲಾ ಒಂದು ಗ್ರಾಮದಲ್ಲಿ ಇದು ಪ್ರತಿನಿತ್ಯವಾಗುತ್ತಿದ್ದು; ಇದರ ವಿರುದ್ಧವಾಗಿ ರೈತಾಪಿ ವರ್ಗ ದಿಂದಲೂ ಆಕ್ರೋಶ ಸ್ಫೋಟ ಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆಗಳು, ಅಲ್ಲಲ್ಲಿ ರಸ್ತೆ ತಡೆ ಇತ್ಯಾದಿ ಪ್ರಕರಣಗಳು ಮುಂದುವರಿ ಯುತ್ತಿದ್ದು; ವನ್ಯಜೀವಿ ಹಾಗೂ ಮಾನವ ಸಂಘರ್ಷ ತಾರಕಕ್ಕೇರುತ್ತಿದೆ.

ಬಾಳೆಲೆ, ಬೀರುಗ, ಕುರ್ಚಿ, ಬಿರುನಾಣಿ, ಕುಟ್ಟ, ತಿತಿಮತಿ ಮತ್ತಿತರ ಕಡೆಗಳಲ್ಲಿ ಆನೆ, ಹುಲಿ, ಚಿರತೆ ಸೇರಿದಂತೆ ಕರಡಿಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದು; ಜಾನುವಾರು ಗಳನ್ನು ಕಳೆದುಕೊಳ್ಳುತ್ತಿರುವ ರೈತರು ತಾವೂ ಸ್ವತಃ ಆತಂಕದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ದಕ್ಷಿಣ ಕೊಡಗು ಮಾತ್ರವಲ್ಲದೆ; ಉತ್ತರ ಕೊಡಗಿನ ಹಲವಾರು ಕಡೆಗಳಲ್ಲಿಯೂ ಕಾಡಾನೆಗಳು ನಾಡಿಗೆ ಲಗ್ಗೆಯಿಡುತ್ತಿದ್ದು; ರೈತರು- ಬೆಳೆಗಾರರ ಕೃಷಿ ಫಸಲುಗಳು ನಾಶಗೊಳ್ಳುತ್ತಿವೆ. ಹಾಡಹಗಲೇ ಮುಖ್ಯ ರಸ್ತೆಗಳಲ್ಲೇ ಆನೆಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು, ತೋಟ ಗದ್ದೆಗಳಿಗೆ ತೆರಳಲು ಜನತೆ, ಭಯಪಡುವಂತಾಗಿದೆ.

ಇಂದು ಮಹತ್ವದ ಸಭೆ

ಪ್ರಸ್ತುತ ಪರಿಸ್ಥಿತಿ, ರೈತರು, ಸಂಘಟನೆಗಳ ಪ್ರತಿಭಟನೆ, ಬೇಡಿಕೆ ಯಂತೆ ಅರಣ್ಯ ಇಲಾಖೆ ವತಿಯಿಂದ ತಾ. 29 ರಂದು (ಇಂದು) ಬಾಳೆಲೆ ಕೊಡವ ಸಮಾಜದಲ್ಲಿ ಮಹತ್ವದ ಸಭೆಯೊಂದನ್ನು ಆಯೋಜಿಸಲಾಗಿದೆ.

ಕುಟ್ಟ ಗ್ರಾಮದಲ್ಲಿ ಇತ್ತೀಚೆಗೆ ಕಾರ್ಮಿಕರೊಬ್ಬರು ಬಲಿಯಾಗಿರುವ ಪ್ರಕರಣ ಸೇರಿದಂತೆ ಹುಲಿ - ಚಿರತೆ ದಾಳಿಯಿಂದಾಗಿ ಹಲವಾರು ಜಾನುವಾರುಗಳು ಬಲಿಯಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯಾ ಸ್ಥಳಗಳಲ್ಲಿ ವಿವಿದ ಸಂಘ - ಸಂಸ್ಥೆಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಮಾತ್ರವಲ್ಲದೆ ಈ ಬಗ್ಗೆ ಅರಣ್ಯ ಇಲಾಖೆಯ ಮೇಲೂ ಸಾಕಷ್ಟು ಒತ್ತಡ ಎದುರಾಗಿರುವ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿತಗೊಂಡಿದೆ.

ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ನಿಯಂತ್ರಿಸುವ ಕುರಿತು ಚರ್ಚಿಸಲು ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳನ್ನು ಒಳಗೊಂಡಂತೆ ಸಮಾಲೋಚನಾ ಸಭೆ ಬೆಳಿಗ್ಗೆ 11 ರಿಂದ ಬಾಳೆಲೆ ಕೊಡವ ಸಮಾಜದಲ್ಲಿ ನಿಗದಿಯಾಗಿರುವದಾಗಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಕೊಡಗು ಹಾಗೂ ಹುಣಸೂರು, ನಾಗರಹೊಳೆ ವಿಭಾಗದ ಅರಣ್ಯ ಇಲಾಖೆಯ ಪ್ರಮುಖ ಅಧಿಕಾರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಿಲ್ಲೆಯ ರೈತರು ಸಮಸ್ಯೆಗಳ ಗಂಭೀರತೆಯನ್ನು ಸಭೆಗೆ ಮುಂಚಿತವಾಗಿ ಲಿಖಿತ ರೂಪದಲ್ಲಿ ಸಲ್ಲಿಸಿದಲ್ಲಿ ಅದನ್ನು ಸಭೆಯಲ್ಲಿ ಸಂಬಂಧಿಸಿದವರ ಎದುರು ಗಂಭೀರವಾಗಿ ಪರಿಗಣಿಸಿ ಚರ್ಚಿಸಲಾಗುವದು. ಇದರೊಂದಿಗೆ ರೈತರು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ರೈತ ಸಂಘವೂ ವಿನಂತಿಸಿದೆ.