ಸೋಮವಾರಪೇಟೆ, ನ.27: ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ವರ್ತಕ ಸಮುದಾಯದ ಬದುಕು ಸಂಕಷ್ಟದಲ್ಲಿದ್ದು, ಈ ಮಧ್ಯೆ ಅಭಿವೃದ್ಧಿ ಕಾರ್ಯಗಳು, ಪ್ರವಾಸೋದ್ಯಮದ ಬೆಳವಣಿಗೆಗೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರಿಸರ ಪೂರಕ ಪ್ರವಾಸೋದ್ಯಮ ಅಭಿವೃದ್ಧಿಗೆ ವರ್ತಕರೇ ಗಟ್ಟಿ ಧ್ವನಿ ಮೊಳಗಿಸಬೇಕಿದೆ ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಾಜೀ ಅಧ್ಯಕ್ಷ, ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಕರೆ ನೀಡಿದರು.
ಇಲ್ಲಿನ ಮಾನಸ ಸಭಾಂಗಣದಲ್ಲಿ ಆಯೋಜಿಸಿದ್ದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಸೋಮವಾರಪೇಟೆ ಸ್ಥಾನೀಯ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ, ಮುಖ್ಯ ಭಾಷಣ ಮಾಡಿದ ಅವರು, ಕೊಡಗಿನಲ್ಲಿ ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಸೂಕ್ತ ವಾತಾವರಣವಿದ್ದರೂ ಕೆಲವರು ತಡೆಯೊಡ್ಡುತ್ತಿರುವದು ದುರಂತ ಎಂದರು.
ಈ ಹಿಂದೆ ಚೇಂಬರ್ ಆಫ್ ಕಾಮರ್ಸ್ನಿಂದ ಮಡಿಕೇರಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿದ್ದ ಸಂದರ್ಭ 4,374 ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಲು ಮುಂದೆ ಬಂದಿದ್ದರು. ಎಲ್ಲ ಯೋಜನೆಗಳೂ ಪರಿಸರಕ್ಕೆ ಪೂರಕವಾಗಿಯೇ ಇದ್ದವು. ಪರಿಸರ ಮಾಲಿನ್ಯದ ಯೋಜನೆಗಳಿಗೆ ಸ್ವತಃ ಚೇಂಬರ್ ಅವಕಾಶ ನೀಡಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಪರಿಸರದ ಹೆಸರಿನಲ್ಲಿ ವಿರೋಧ ವ್ಯಕ್ತವಾಗಿ ಯೋಜನೆಗಳು ಹೊರಜಿಲ್ಲೆಗಳಿಗೆ ಹೋದವು ಎಂದು ವಿಷಾದಿಸಿದರು.
ಕೊಡಗನ್ನು ಆಂಥೋರಿಯಂ ಜಿಲ್ಲೆ ಎಂದು ಘೋಷಣೆ ಮಾಡಲಾಗಿದ್ದರೂ, ಅದರ ಅಭಿವೃದ್ಧಿಗೆ ಯಾವದೇ ಯೋಜನೆಗಳು ಬಂದಿಲ್ಲ. ಮಲ್ಲಳ್ಳಿ ಜಲಪಾತದ ಅಭಿವೃದ್ಧಿಗೂ ಅಡ್ಡಗಾಲು ಬಿದ್ದಿದೆ. ವಿಭಜಿತ ಸೋಮವಾರಪೇಟೆ ತಾಲೂಕು ಮುಂದಿನ ದಿನಗಳಲ್ಲಿ ಇನ್ನಷ್ಟು ಹಿಂದೆ ಬೀಳುವ ಸಂಭವವಿದ್ದು, ಈ ಭಾಗದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲೇಬೇಕಿದೆ. ಪ್ರವಾಸಿಗರು ಬಂದರೆ ಮಾತ್ರ ವರ್ತಕರು ಒಂದಿಷ್ಟು ಚೇತರಿಸಿಕೊಳ್ಳಬಹುದು ಎಂದು ಚಿದ್ವಿಲಾಸ್ ಅಭಿಪ್ರಾಯಿಸಿದರು.
ತೆರಿಗೆ, ಪರವಾನಗಿ, ತೂಕ ಮತ್ತು ಅಳತೆ, ತಂಬಾಕು ನಿಯಂತ್ರಣ ಸೇರಿದಂತೆ ಸುಮಾರು 28 ಇಲಾಖೆ ಗಳು ವರ್ತಕರನ್ನು ನಿಯಂತ್ರಿಸುತ್ತವೆ. ವರ್ತಕರು ಒಗ್ಗಟ್ಟಾಗದ ಹೊರತು ದಬ್ಬಾಳಿಕೆಗಳಿಂದ ಹೊರಬರಲು ಸಾಧ್ಯವಿಲ್ಲ ಚೇಂಬರ್ನ ಸಂಘಟನೆ ಯಿಂದಾಗಿ ಇಂದು ಕೊಡಗಿನಲ್ಲಿ ಬಲವಂತದ ಬಂದ್ಗೆ ತಡೆಬಿದ್ದಿದೆ; ಸಂಘಟನೆ ಇನ್ನಷ್ಟು ಬಲಿಷ್ಠಗೊಂಡರೆ ಮಾತ್ರ ಸೌಲಭ್ಯಗಳನ್ನು ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಚೇಂಬರ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, 1964ರಲ್ಲಿ ಸ್ಥಾಪನೆಯಾದ ಸಂಘವು ಇಂದಿಗೂ ವರ್ತಕರ ಹಿತಕಾಪಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮನುಕುಮಾರ್ ರೈ ಮಾತನಾಡಿ, ಮುಂದಿನ ದಿನಗಳಲ್ಲಿ ಚೇಂಬರ್ ಆಫ್ ಕಾಮರ್ಸ್ಗೆ ಸ್ವಂತ ನಿವೇಶನ, ಕಟ್ಟಡ ನಿರ್ಮಿಸುವ ಯೋಜನೆಯಿದೆ. ಪ್ರತಿಯೋರ್ವ ವರ್ತಕರೂ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು. ವೃತ್ತಿಯಲ್ಲಿ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಸಂಘದ ಜಿಲ್ಲಾ ನಿರ್ದೇಶಕ ಎ.ಪಿ. ವೀರರಾಜ್, ಸಂಘಟನಾ ಕಾರ್ಯದರ್ಶಿ ಬಿ.ಆರ್. ಪ್ರಮೋದ್, ಸೋಮವಾರಪೇಟೆ ಘಟಕದ ಖಜಾಂಚಿ ಎನ್.ಎಸ್. ಜಯರಾಂ, ಉದ್ಯಮಿ ಶ್ರೀಧರ್ ಅವರುಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಹಿರಿಯ ವರ್ತಕರಾದ ಗೀಸುಸಿಂಗ್ ಮತ್ತು ಎ.ಪಿ. ವೀರರಾಜು ಅವರುಗಳನ್ನು ಸನ್ಮಾನಿಸಲಾಯಿತು. ಸದಸ್ಯರಾದ ಧನುರಾಜ್, ರಾಮಶೆಟ್ಟಿ, ಜಯೇಶ್, ಸುಬ್ರಮಣಿ, ಮುರಳೀಧರ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.