ಮಡಿಕೇರಿ, ನ. 27: ಪ್ರಕೃತಿ ವಿಕೋಪ ಅನುದಾನದ ಕಾಮಗಾರಿ ಕುರಿತು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರದಲ್ಲಿ ಕೆ. ನಿಡುಗಣೆ ಗ್ರಾ.ಪಂ. ಜನಪ್ರತಿನಿಧಿಗಳನ್ನು ಕೈಬಿಟ್ಟಿರುವುದಕ್ಕೆ ಗ್ರಾ.ಪಂ. ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಗ್ರಾಮಸಭೆಯಲ್ಲಿ ನಡೆದಿದೆ.

ಕೆ.ನಿಡುಗಣೆ ಗ್ರಾ.ಪಂ. ಅಧ್ಯಕ್ಷೆ ಉದಿಯಂಡ ರೀಟಾ ಮುತ್ತಣ್ಣ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ವಿಚಾರದ ಕುರಿತು ಗಂಭೀರ ಚರ್ಚೆ ನಡೆಯಿತು. ಪ್ರಾಕೃತಿಕ ವಿಕೋಪ ಕಾಮಗಾರಿಗಳ ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ವಿವಿಧ ಗ್ರಾ.ಪಂ. ವ್ಯಾಪ್ತಿಯ ಕಾಮಗಾರಿಗಳ ಕುರಿತು ಸ್ಥಳೀಯ ಪತ್ರಿಕೆಗಳಲ್ಲಿ ಚಿತ್ರಗಳು ಪ್ರಕಟವಾಗಿದ್ದವು. ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕಾಮಗಾರಿ ಚಿತ್ರದಲ್ಲಿ ತಾ.ಪಂ. ಸದಸ್ಯ ರಾಯ್ ತಮ್ಮಯ್ಯ ಕಾಣಿಸಿಕೊಂಡಿದ್ದು, ಗ್ರಾ.ಪಂ. ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.

ಈ ಬಗ್ಗೆ ವಿಷಯ ಪ್ರಸ್ಥಾಪಿಸಿದ ಗ್ರಾ.ಪಂ. ಸದಸ್ಯ ಕೊಕ್ಕಲೇರ ಅಯ್ಯಪ್ಪ, ರಾತ್ರಿ ಹಗಲು ನಿದ್ದೆಗೆಟ್ಟು ಗ್ರಾಮಗಳಲ್ಲಿ ಸಂಚರಿಸಿ ಅಗತ್ಯವಿರುವ ಕಾಮಗಾರಿ ಗಳನ್ನು ಪಟ್ಟಿಗೆ ಸೇರಿಸಿದ್ದೇವೆ. ಆದರೆ, ಪತ್ರಿಕೆಗಳಲ್ಲಿ ಯಾರದ್ದೋ ಚಿತ್ರಗಳು ಪ್ರಕಟವಾಗಿದೆ. ನಾವು ಮಾಡಿದ ಕೆಲಸಕ್ಕೆ ಬೇರೆಯವರು ಪೋಟೋ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಇಲ್ಲದಿದ್ದಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ಸದಸ್ಯ ಜಾನ್ಸನ್ ಪಿಂಟೋ ಕೂಡ ದ್ವನಿಗೂಡಿಸಿದರು. ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕಾಮಗಾರಿ ಚಿತ್ರದಲ್ಲಿ ಮಾತ್ರ ಈ ರೀತಿಯ ಗೊಂದಲ ಉಂಟಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತಾ.ಪಂ. ಸದಸ್ಯ ರಾಯ್ ತಮ್ಮಯ್ಯ, ನನ್ನನ್ನು ಮೂರು ಗ್ರಾ.ಪಂ.ಗಳಿಗೆ ಸೂಚಕರಾಗಿ ನೇಮಿಸಲಾಗಿತ್ತು. ಇಂಜಿನಿಯರ್ ಭೇಟಿ ಸಂದರ್ಭ ಜಾಗ ತೋರಿಸಲು ಹೇಳಿದ್ದರಿಂದ ಕರೆದುಕೊಂಡು ಹೋಗಿದ್ದೆ. ಆ ಸಂದರ್ಭದಲ್ಲಿ ತೆಗೆದ ಚಿತ್ರಗಳು ಪತ್ರಿಕೆಗೆ ಹೇಗೆ ಹೋಗಿದೆ ಗೊತ್ತಿಲ್ಲ. ಪತ್ರಿಕೆಯಲ್ಲಿ ಬರುವ ಬಗ್ಗೆಯೂ ತನಗೆ ಮಾಹಿತಿ ಇರಲಿಲ್ಲ ಎಂದು ಹೇಳಿದರು.

ನೋಡಲ್ ಅಧಿಕಾರಿ ಹಾಗೂ ಪಂಚಾಯತ್ ರಾಜ್ ಇಂಜಿನಿಯ ರಿಂಗ್ ಉಪವಿಭಾಗದ ಸಹಾಯಕ ಅಭಿಯಂತರ ಗವಿ ಸಿದ್ದಯ್ಯ ಮಾತನಾಡಿ, ಸ್ಥಳೀಯ ಜನಪ್ರತಿನಿಧಿ ಗಳಿಗೆ ಮಾಹಿತಿ ನೀಡದೆ ಅಧಿಕಾರಿಗಳು ಬಂದಿದ್ದರಿಂದ ಗೊಂದಲ ಸೃಷ್ಟಿ ಯಾಗಿದೆ ಎಂದು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

ಪಡಿತರ ಪಡೆಯುವ ಸಂದರ್ಭ ಬಯೋಮೆಟ್ರಿಕ್ ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲೆಂದರಲ್ಲಿ ಕೆಲಸ ಮಾಡಿಕೊಂಡು ಇರುತ್ತೇವೆ. ಒಬ್ಬರು ಪಡಿತರ ಪಡೆಯಲು ಹೋದಾಗ ಬಯೋಮೆಟ್ರಿಕ್ ಕೆಲಸ ಮಾಡದಿದ್ದರೆ ಕುಟುಂಬದ ಮತ್ತೊಬ್ಬ ಸದಸ್ಯರು ಹೋಗಬೇಕಾಗುತ್ತದೆ. ಇದರಿಂದ ಸಮಸ್ಯೆಯುಂಟಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಇದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಮಾಂದಲ್‍ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್‍ಗಳನ್ನು ಪಂಚಾಯಿತಿ ಸಮೀಪವೇ ನಿಲುಗಡೆ ಗೊಳಿಸುತ್ತಿರುವದಕ್ಕೆ ಅಧ್ಯಕ್ಷೆ ರೀಟಾ ಮುತ್ತಣ್ಣ ಹಾಗೂ ಸದಸ್ಯ ಡೀನ್ ಬೋಪಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಜಿಲ್ಲಾಧಿಕಾರಿಗಳು ಸಭೆ ಕರೆಯುವದಾಗಿ ಹೇಳಿದ್ದು, ಅಲ್ಲಿ ಯವರೆಗೆ ಇಲ್ಲಿ ಜೀಪ್ ನಿಲ್ಲಿಸದಂತೆ ಸೂಚಿಸಿದ್ದಾರೆ. ಆದರೆ ಮತ್ತೆ ಜೀಪ್‍ಗಳನ್ನು ಇಲ್ಲಿಯೇ ನಿಲುಗಡೆ ಗೊಳಿಸುತ್ತಿರುವದರಿಂದ ಪಂಚಾಯಿ ತಿಗೆ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲಾಧಿಕಾರಿಗಳು ದರ ನಿಗಧಿಗೊಳಿಸಿ ದ್ದರೂ ಅಧಿಕ ಮೊತ್ತ ಪಡೆಯುವ ಬಗ್ಗೆಯೂ ದೂರುಗಳು ಬರುತ್ತಿದೆ. ಇನ್ನಾದರೂ ಜೀಪ್ ನಿಲುಗಡೆಗೊಳಿಸ ದಂತೆ ಚಾಲಕರಿಗೆ ಸೂಚನೆ ನೀಡಿದರು.

ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಜಾಜಿ ಸತೀಶ್, ಸದಸ್ಯರಾದ ಬಿ.ಎ. ಆನಂದ, ಪ್ರೇಮ್‍ಕುಮಾರ್, ಜಯಮ್ಮ, ದೇವಕಿ, ಅಧಿಕಾರಿಗಳಾದ ಕೃಷ್ಣಮೂರ್ತಿ, ವಾಸುದೇವ, ಚೈತ್ರಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.