ಗೋಣಿಮರೂರು ಗ್ರಾಮಸ್ಥರ ವಿರೋಧ

ಸೋಮವಾರಪೇಟೆ, ನ. 28: ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಮರೂರು ಗ್ರಾಮದಲ್ಲಿನ ಮೀಸಲು ಅರಣ್ಯದಲ್ಲಿ, ಗ್ರಾಮ ಪಂಚಾಯಿತಿಯವರು ಕಲ್ಲುಕೋರೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದು, ಇದನ್ನು ವಿರೋಧಿಸುವದಾಗಿ ಗೋಣಿಮರೂರು ಗ್ರಾಮಸ್ಥರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಜಿ.ಈ. ಪುಟ್ಟಪ್ಪ, ಪಂಚಾಯಿತಿ ವ್ಯಾಪ್ತಿಯಲ್ಲಿ ಜೇನು ಕುರುಬರು ಸೇರಿದಂತೆ ಪರಿಶಿಷ್ಟ ಪಂಗಡದ 20 ಹಾಡಿಗಳಿವೆ. ಇಲ್ಲಿಯ ಜನರ ಮೂಲಭೂತ ಅವಶ್ಯಕತೆಗಳನ್ನು ಪಂಚಾಯಿತಿ ಇನ್ನೂ ಈಡೇರಿಸಿಲ್ಲ. ಈ ಭಾಗಕ್ಕೆ ರಸ್ತೆ ಅವಶ್ಯಕತೆ ಇದ್ದರೂ, ಹಾಡಿಗಳನ್ನು ಬಿಟ್ಟು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ವತಿಯಿಂದ ಬಿಡುಗಡೆಯಾದ ರೂ. 15 ಲಕ್ಷ ಹಣದಲ್ಲಿ ಕ್ರಷರ್ ಘಟಕಕ್ಕೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ವರ್ಷಗಳಿಂದ ಅತಿವೃಷ್ಟಿಯಿಂದ ಬಳಲುತ್ತಿರುವ ರೈತರಿಗೆ ಯಾವದೇ ಪರಿಹಾರ ನೀಡಿಲ್ಲ. ಗ್ರಾಮದ ಹಲವು ಕೆರೆಗಳಲ್ಲಿ ಹೂಳು ತುಂಬಿದ್ದು, ಅದನ್ನು ತೆಗೆಯುವ ಗೋಜಿಗೆ ಹೋಗಿಲ್ಲ. ಇದೀಗ ಕಲ್ಲುಕೋರೆಯ ಉದ್ದಾರಕ್ಕೆ ಹೊರಟಿರುವದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ತಮ್ಮ ಸ್ವಂತ ಕೊಳವೆ ಬಾವಿಯಿಂದ ಕುಡಿಯುವ ನೀರು ತೆಗೆದುಕೊಳ್ಳುವದಕ್ಕೆ ಸೆಸ್ಕ್ ಇಲಾಖೆಯವರು ದಂಡವಿದಿಸಿದ್ದರೂ, ಗ್ರಾಮ ಪಂಚಾಯಿತಿಯವರು ಯಾವದೇ ಚಕಾರ ಎತ್ತುತ್ತಿಲ್ಲ. ಜೇನು ಕುರುಬ ಕುಟುಂಬದ ಫಲಾನುಭವಿಗಳಿಗೆ ಶೌಚಾಲಯದ ವ್ಯವಸ್ಥೆಯನ್ನು ಒದಗಿಸಿಲ್ಲ. ಇಂದಿಗೂ ಹಾಡಿಯ ಕೆಲವು ಕುಟುಂಬಗಳು ಗುಡಿಸಲುಗಳಲ್ಲಿಯೇ ವಾಸ ಮಾಡುತ್ತಿರುವದು ಪಂಚಾಯಿತಿಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಮೊದಲು ಪರಿಹರಿಸುವಂತೆ ಆಗ್ರಹಿಸಿದರು. ಮೀಸಲು ಅರಣ್ಯದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರೆ ಕೇವಲ ಕಲ್ಲುಕೋರೆಯ ಕ್ರಷರ್‍ಗೆ ಮಾತ್ರ ಉಪಯೋಗವಾಗುತ್ತದೆ. ಇದರ ಬದಲು ಹಾಡಿಯ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ಸ್ಥಳದಲ್ಲಿ ರಸ್ತೆ ನಿರ್ಮಿಸಲಿ ಎಂದು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ಎ.ಬಿ. ಧರ್ಮಪ್ಪ, ಕೆ.ಸಿ. ದೇವಯ್ಯ, ಜಿ.ಎಮ್. ಮೋಹನ್‍ಕುಮಾರ್, ಎನ್.ಕೆ. ಪೂವಯ್ಯ ಉಪಸ್ಥಿತರಿದ್ದರು.