ಕುಶಾಲನಗರ, ನ. 28: ಮಾತೆ ಕಾವೇರಿ ಮಹಾ ಆರತಿ ಬಳಗ, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ಟ್ ಕುಶಾಲನಗರ ಜಂಟಿ ಆಶ್ರಯದಲ್ಲಿ ಇಂದಿನಿಂದ (ತಾ. 29 ರಿಂದ) ಎರಡು ದಿನಗಳ ಕಾಲ ಕುಶಾಲನಗರ ದಲ್ಲಿ ಕಾವೇರಿ ನದಿ ಹಬ್ಬ ಕಾರ್ಯಕ್ರಮ ನಡೆಯಲಿದೆ.
ಕುಶಾಲನಗರ ಪಟ್ಟಣ ಪಂಚಾಯ್ತಿ ಕುಶಾಲನಗರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗ ದೊಂದಿಗೆ 29 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದ ಆರತಿ ಕ್ಷೇತ್ರದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ವೃಕ್ಷಮಾತೆ ಪದ್ಮಶ್ರೀ ಡಾ.ಸಾಲುಮರದ ತಿಮ್ಮಕ್ಕ ಚಾಲನೆ ನೀಡುವರು.
ಯುವಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಹಾಗೂ ಇತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 3 ಗಂಟೆಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವದು. ನಂತರ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮಗಳು ಜರುಗಲಿವೆ.
4 ಗಂಟೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ಸುತ್ತೂರು ಕ್ಷೇತ್ರದ ಮಠಾಧೀಶರಾದ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ ಗಳು ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ನಮಾಮಿ ಕಾವೇರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮತ್ತು ನಾಡಿನ ಮಠಾಧೀಶರು, ಸಾಧುಸಂತರುಗಳು, ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆದು ಪವಿತ್ರ ಕಾರ್ತಿಕ ಮಾಸದ ಹಿನ್ನಲೆಯಲ್ಲಿ ಸಂಜೆ 5.30 ಗಂಟೆಗೆ ಜೀವನದಿ ಕಾವೇರಿಗೆ ವಿಶೇಷ ಮಹಾ ಆರತಿ ಬೆಳಗುವ ಕಾರ್ಯಕ್ರಮ ಜರುಗಲಿದೆ. ಸಂಜೆ 6 ಗಂಟೆಯಿಂದ ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರಮುಖ ಸ್ವಾಮಿ ಸೂರ್ಯ ಪಾದ ಜಿ ಅವರ ತಂಡದಿಂದ ಸತ್ಸಂಗ ಕಾರ್ಯಕ್ರಮ ನಡೆಯುವದು.
ತಾ.30 ರ ಶನಿವಾರ ಬೆಳಗ್ಗೆ 10.30 ಕ್ಕೆ ಸ್ವಚ್ಛತಾ ಕಾರ್ಯಕ್ರಮ ಮತ್ತು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಸ್ಥಾಪಕÀ ಶ್ರೀ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು ಕುಶಾಲನಗರ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಕೀರ್ತನೆ, ನಂತರ ಸಂಜೆ 5 ಗಂಟೆಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಕರ್ನಾಟಕ-ತಮಿಳುನಾಡು ಪ್ರಾಂತ್ಯದ ಸಂಚಾಲಕ ವೇ. ಬ್ರ.ಡಾ. ಭಾನುಪ್ರಕಾಶ್ ಶರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆ ಮೈಸೂರು ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅರೆಮಾದನಹಳ್ಳಿ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು, ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ, ಪೊನ್ನಂಪೇಟೆಯ ಶ್ರೀ ಬೋಧ ಸ್ವರೂಪಾನಂದ ಜಿ. ಸಿದ್ದಲಿಂಗಪುರದ ಶ್ರೀ ರಾಜೇಶ್ನಾಥ್ ಜಿ. ದಿವ್ಯ ಸಾನಿಧ್ಯ ದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷÀ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಿಇಒ ಲಕ್ಷ್ಮಿಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್ ಪಾಲ್ಗೊಳ್ಳುವರು. ಗಣ್ಯರ ಸಮ್ಮುಖದಲ್ಲಿ ಕಾವೇರಿ ನದಿ ಹಬ್ಬ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ನಂತರ ಕುಶಾಲನಗರದ ಕುಶಲ ಅರ್ಚಕರ ಸಂಘದಿಂದ ಮಂತ್ರ ವೇದ ಘೋಷ ಕಾರ್ಯಕ್ರಮದ ಬಳಿಕ ಸಂಜೆ 6 ಗಂಟೆಗೆ ಜೀವನದಿ ಕಾವೇರಿಗೆ ಮಹಾ ಆರತಿ ಬೆಳಗುವದರೊಂದಿಗೆ ಎರಡು ದಿನಗಳ ಕಾವೇರಿ ಹಬ್ಬಕ್ಕೆ ತೆರೆ ಬೀಳಲಿದೆ. ಸ್ಥಳೀಯ ಕಾವೇರಿ ಕಲಾ ಪರಿಷತ್, ಟೀಮ್ ಆಟಿಟ್ಯೂಡ್ ಡ್ಯಾನ್ಸ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಹಾ ಆರತಿ ಬಳಗದ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.