ಕುಶಾಲನಗರ, ನ. 25: ಬಿಎಸ್‍ಎನ್‍ಎಲ್ ಸಂಸ್ಥೆ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಯಾದ ಬೆನ್ನಲ್ಲೇ ನೌಕರರು ನಿವೃತ್ತಿಗೆ ಸಾಮೂಹಿಕವಾಗಿ ಅರ್ಜಿ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಈ ಸಾಲಿನ ಅಂತ್ಯದಲ್ಲಿ ನೌಕರರ ಕೊರತೆಯನ್ನು ಬಿಎಸ್‍ಎನ್‍ಎಲ್ ಎದುರಿಸುವ ಸಾಧ್ಯತೆ ಖಚಿತವಾಗಿದೆ.

30 ವರ್ಷ ಸೇವೆ ಅಥವಾ 50 ವರ್ಷ ವಯೋಮಾನ ಆಧಾರದಲ್ಲಿ ಬಿಎಸ್‍ಎನ್‍ಎಲ್ ಈ ಯೋಜನೆಯನ್ನು ನೌಕರರಿಗೆ ಜಾರಿ ಮಾಡಿದ್ದು, ಕೊಡಗು ಜಿಲ್ಲೆಯಲ್ಲಿ ಅಂದಾಜು 150 ನೌಕರರಲ್ಲಿ ಶೇ. 85 ರಷ್ಟು ನೌಕರರು ನಿವೃತ್ತಿ ಯೋಜನೆಗೆ ಅರ್ಜಿ ಸಲ್ಲಿಸಿರುವದಾಗಿ ತಿಳಿದುಬಂದಿದೆ.

ರಾಷ್ಟ್ರಮಟ್ಟದಲ್ಲಿ 1 ಲಕ್ಷದ 63 ಸಾವಿರ ಸಿಬ್ಬಂದಿಗಳು ಇರುವ ಬಿಎಸ್‍ಎನ್‍ಎಲ್‍ನಲ್ಲಿ ಸುಮಾರು 1 ಲಕ್ಷದ 16 ಸಾವಿರ ಮಂದಿ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಎಂಟಿಎನ್‍ಎಲ್‍ನ 10 ಸಾವಿರ ಸೇರಿದಂತೆ ಒಟ್ಟು 80 ಸಾವಿರ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಗೆ ಅವಕಾಶವಿದ್ದು, ಬಹುತೇಕ ನೌಕರರು 50 ರ ವಯೋಮಾನ ದಾಟಿದ್ದು ಈ ಯೋಜನೆಯನ್ನು ಸ್ವಾಗತಿಸಿದ್ದಾರೆ. ಇನ್ನೊಂದೆಡೆ ಕಳೆದ ಕೆಲವು ತಿಂಗಳಿನಿಂದ ಬಿಎಸ್‍ಎನ್‍ಎಲ್ ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಸೌಲಭ್ಯಗಳು ದೊರಕದೆ ವಿಳಂಬವಾಗುತ್ತಿರುವ ಹಿನ್ನೆಲೆ ಬಹುತೇಕ ನೌಕರರು ಸ್ವಯಂ ನಿವೃತ್ತಿ ಬಯಸಿರುವದಾಗಿ ಸಿಬ್ಬಂದಿಗಳು ತಮ್ಮ ಅಸಮಾಧಾನವನ್ನು ಹೊರಗೆಡವಿದ್ದಾರೆ. ಇದುವರೆಗೆ ನೌಕರರು ಸಲ್ಲಿಸಿದ್ದ ವರ್ಷಗಳ ಸೇವೆಯನ್ನು ಪರಿಗಣಿಸಿ ವರ್ಷವೊಂದಕ್ಕೆ 35 ದಿನಗಳ ವೇತನ ಹಾಗೂ ಬಾಕಿ ಉಳಿದಿರುವ ಸೇವಾ ಅವಧಿಯ ವರ್ಷವೊಂದಕ್ಕೆ 25 ದಿನಗಳ ವೇತನ ಮಾದರಿಯಲ್ಲಿ ಮೊತ್ತ ನೀಡುವ ಯೋಜನೆ ಬಿಎಸ್‍ಎನ್‍ಎಲ್ ಸಂಸ್ಥೆಯದ್ದಾಗಿದೆ.

ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯ ತಕ್ಷಣದಿಂದಲೇ ಜಾರಿಯಾಗಲಿದ್ದು, ಉಳಿದಂತೆ ಸಂಸ್ಥೆಯಿಂದ ದೊರಕಬೇಕಾದ ಮೊತ್ತವನ್ನು ಮಾತ್ರ ನೌಕರರ 60ನೇ ವಯೋಮಾನದಲ್ಲಿ ಸಂಸ್ಥೆ ನೀಡಲಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ಕೊಡಗು ಜಿಲ್ಲೆಯಲ್ಲಿ ದೂರವಾಣಿ ಸೇವಾ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಲಿದ್ದು 2020 ರ ಜನವರಿ 1 ರಿಂದ ಗ್ರಾಹಕರ ಸೇವಾ ಕೇಂದ್ರಗಳ ಕಾರ್ಯನಿರ್ವಹಣೆ ಅವಧಿಯನ್ನು ಕಡಿತಗೊಳಿಸುವ ಬಗ್ಗೆ ಆದೇಶ ಹೊರಬಿದ್ದಿದೆ.

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಗ್ರಾಹಕರ ಸೇವಾ ಕೇಂದ್ರಗಳಲ್ಲಿ ಸೇವೆ ಲಭ್ಯವಾಗಲಿದ್ದು, ಉಳಿದಂತೆ ಆನ್‍ಲೈನ್ ಸೇವೆಗಳ ಮುಖಾಂತರ ಗ್ರಾಹಕರು ಬಿಲ್ ಪಾವತಿ ಮತ್ತಿತರ ಸೌಲಭ್ಯಗಳನ್ನು ಪಡೆಯಬಹುದು ಎಂದು ಕೊಡಗು ಬಿಎಸ್‍ಎನ್‍ಎಲ್ ಪ್ರಕಟಣೆ ಹೊರಡಿಸಿದೆ.

- ಚಂದ್ರಮೋಹನ್