ಮಡಿಕೇರಿ, ನ. 25: ಬಡ ಮಕ್ಕಳ ಏಳಿಗೆಯೆ ನಮ್ಮ ಸಂಸ್ಥೆಯ ಗುರಿ ಯಾಗಿದೆ ಎಂದು ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಕೆ.ಎಂ. ಶಿವಕುಮಾರನ್ ಹೇಳಿದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬಿಇಎಲ್ ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿರುವ 2.25 ಕೋಟಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜಿ.ಪಂ. ಸಿಇಓ ಲಕ್ಷ್ಮಿಪ್ರಿಯ ಅವರೊಂದಿಗೆ ಉದ್ಘಾಟಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಬಿಇಎಲ್ ಸಂಸ್ಥೆಯು ಬಡ ಮಕ್ಕಳು ಹಾಗೂ ಮಧ್ಯಮ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಶಾಲಾ ಕಟ್ಟಡಗಳ ನಿರ್ಮಾಣ; ನವೀಕರಣದಂತೆ ಕೆಲಸಗಳಿಗೆ ಒತ್ತು ನೀಡುತ್ತಿದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಗಳು ದಾನಿಗಳಿಂದ ದೊರೆತ ಶಾಲಾ ಕಟ್ಟಡಗಳನ್ನು ಉತ್ತಮ ನಿರ್ವಹಣೆಯೊಂದಿಗೆ ಕಾಪಾಡಿ ಕೊಳ್ಳಬೇಕೆಂದು ಸಲಹೆಯಿತ್ತರು. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಬಿಇಎಲ್ ಸಂಸ್ಥೆ ಸದಾ ಸೇವೆ ಒದಗಿಸಲಿದೆ ಎಂದು ಹೇಳಿದರು.

(ಮೊದಲ ಪುಟದಿಂದ) ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾಗಿ ನಿವೃತ್ತರಾಗಿರುವ ಹಾಗೂ ಈ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ, ಕರ್ತವ್ಯ ನಿರ್ವಹಿಸಿದ್ದ ಜಿ.ಆರ್.ಬಸವರಾಜ ಅವರು ಮಾತನಾಡಿ ಸರ್ಕಾರ ಸರ್ಕಾರಿ ಶಾಲೆಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಹಾಗೆಯೇ ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸಿದಾಗ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬಿಇಎಲ್ ಸಂಸ್ಥೆಯ ನಿರ್ದೇಶಕ ಕೆ.ಎಂ.ಶಿವಕುಮಾರನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಜಿ.ಆರ್.ಬಸವರಾಜ, ಬಿಇಎಲ್ ಸಂಸ್ಥೆಯ ಶಾಕಿರ್ ಹುಸೇನ್, ಗುರುರಾಜ್, ಭುವನೇಂದ್ರ ಸ್ವಾಮಿ, ರಾಜ ರೈ, ಬಿ.ಕೆ.ಶಶಿಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಎಸ್‍ಡಿಎಂಸಿ ಅಧ್ಯಕ್ಷರಾದ ಶಿವಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು, ನಿವೃತ್ತ ಮುಖ್ಯೋಪಾಧ್ಯಾಯಿನಿ ವಸಂತಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯನ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಚಿತ್ರಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಎಸ್.ಚೇತನ್, ಮಡಿಕೇರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷÀ ಮೋಹನ್ ಪೆರಾಜೆ, ಸೋಮವಾರಪೇಟೆ ಅಧ್ಯಕ್ಷ ಮಂಜುನಾಥ ಇತರರು ಇದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಸ್ವಾಗತಿಸಿ, ರೇವತಿ ರಮೇಶ್ ನಿರೂಪಿಸಿ, ಶಿಕ್ಷಕಿ ತೇಜಸ್ವಿ ವರದಿ ವಾಚಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ ವಂದಿಸಿದರು.