ಸೋಮವಾರಪೇಟೆ,ನ.26: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಸರ್ವೆ ಇಲಾಖೆ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯ ಕ್ರಮಕ್ಕೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳೇ ಗೈರಾಗಿದ್ದರಿಂದ ನ್ಯಾಯಾಧೀಶರು ಗರಂ ಆದ ಘಟನೆ ನಡೆಯಿತು.

ಪಟ್ಟಣ ಪಂಚಾಯಿತಿ ಸಭಾಂ ಗಣದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಬೆಳಿಗ್ಗೆ 9ಗಂಟೆಗೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ನ್ಯಾಯಾಧೀಶರಿಬ್ಬರೂ ಸಭಾಂಗಣಕ್ಕೆ ಆಗಮಿಸಿದ್ದರು.

ಇವರೊಂದಿಗೆ ಮೂರ್ನಾಲ್ಕು ವಕೀಲರುಗಳು, ನಾಲ್ಕೈದು ಮಂದಿ ಸರ್ಕಾರಿ ಸಿಬ್ಬಂದಿಗಳನ್ನು ಹೊರತು ಪಡಿಸಿ ಸಭಾಂಗಣದಲ್ಲಿ ಬೇರ್ಯಾರೂ ಇರಲಿಲ್ಲ. ಇದರಿಂದ ಕೋಪಗೊಂಡ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್. ದಿಂಡಿಲಕೊಪ್ಪ ಅವರು, ‘ಸರ್ಕಾರಿ ಅಧಿಕಾರಿಗಳಿಗೆ ಸಮಯ ಪ್ರಜ್ಞೆ ಇಲ್ಲವೆ? ಸಂವಿಧಾನ ದಿನಾಚರಣೆ ಯಂತಹ ಕಾರ್ಯಕ್ರಮ ಗಳಿಗೆ ಅಧಿಕಾರಿಗಳು ಗೈರಾಗುವದು ಸಮಂಜಸವಲ್ಲ. ನ್ಯಾಯಾಲಯ ದಿಂದ ನೋಟೀಸ್ ನೀಡಬೇಕಾಗು ತ್ತದೆ’ ಎಂದು ಅಸಮಾಧಾನ ಹೊರ ಹಾಕಿದರು.

‘ಸರ್ಕಾರಿ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗ ಬೇಕು’ ಎಂದು ನೀತಿ ಪಾಠ ಹೇಳಿದ ನ್ಯಾಯಾಧೀಶರು, ಸಭಾಂಗಣದಲ್ಲಿ ಜನರಿಲ್ಲದ ಕಾರಣ, ನ್ಯಾಯಾಲಯದ ಆವರಣಕ್ಕೆ ಕಾರ್ಯಕ್ರಮವನ್ನು ಸ್ಥಳಾಂತರಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿ ಹೊರ ನಡೆದರು. ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ ಹಿನ್ನೆಲೆ ಪಂಚಾಯಿತಿ ಸಭಾಂಗಣದಲ್ಲೇ ಕಾರ್ಯಕ್ರಮ ನಡೆಯಿತು.

ನಂತರ ಮಾತನಾಡಿದ ಎಸ್.ಆರ್. ದಿಂಡಲಕೊಪ್ಪ ಅವರು, ಜಗತ್ತಿನ ಶ್ರೇಷ್ಠ ಹಾಗು ಬಹುದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಸಂವಿಧಾನದ ವಿಷಯ ಮಹತ್ವದ ಬಗ್ಗೆ ವಿಮರ್ಶೆ ಮಾಡುವ ಅವಶ್ಯಕತೆ ಇದೆ. ಸಂವಿಧಾನದ ಹಕ್ಕುಗಳ ಜೊತೆಗೆ ಕರ್ತವ್ಯಗಳಿವೆ ಎಂಬದನ್ನು ಮನಗಾಣಬೇಕು. ಕಾನೂನನ್ನು ಮನಃಪೂರ್ವಕವಾಗಿ ಗೌರವಿಸುವದರೊಂದಿಗೆ ಸಂವಿಧಾನದ ಅಶಯಗಳನ್ನು ಜಾರಿಗೆ ತರಲು ಪ್ರತಿಯೊಬ್ಬರೂ ಮುಂದಾದಾಗ ಮಾತ್ರ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದರು. ಸರ್ಕಾರಿ ನೌಕರರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಕೊಳ್ಳಬೇಕು. ಕಾನೂನು ಕಾಯಿದೆ ಬಲಿಷ್ಠವಾಗಿದ್ದರೂ, ಕೆಲವರು ಹದ್ದುಮೀರಿ ವರ್ತಿಸುತ್ತಿದ್ದಾರೆ. ಲೋಕಾಯುಕ್ತರು, ವಿಜಿಲೆನ್ಸ್‍ನವರಿಗೂ ಹೆದರುತ್ತಿಲ್ಲ. ಕರ್ತವ್ಯಲೋಪವೆಸಗಿದರೆ, ಕಾನೂನು ಕೈಗೆ ಸಿಕ್ಕಿಹಾಕಿಕೊಳ್ಳ ಬೇಕಾಗುತ್ತದೆ. ದೇಶದಲ್ಲಿ 15ರಷ್ಟು ಉನ್ನತ ಅಧಿಕಾರಿಗಳು, 10ರಿಂದ 15 ನ್ಯಾಯಾಧೀಶರುಗಳು ವಜಾಗೊಂಡಿ ದ್ದಾರೆ. ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದಾಗ ಮಾತ್ರ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ರಾದ ಪ್ರತಿಭಾ ಮಾತನಾಡಿ, ಕಾನೂನಿನ ಜ್ಞಾನ ಪ್ರತಿಯೊಬ್ಬರಲ್ಲೂ ಇರಬೇಕು. ವಿದ್ಯಾರ್ಥಿಗಳು ಭಾರತದ ಸಂವಿಧಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತೆಗೆದುಕೊಂಡು ಸಮಯ ಸಿಕ್ಕಾಗ ಓದಿ ಮನನ ಮಾಡಿಕೊಳ್ಳಬೇಕು. ಕಾನೂನಿಗೆ ಗೌರವ ಕೊಡುವ ವ್ಯಕ್ತಿ ಉತ್ತಮ ನಾಗರಿಕ ನಾಗುತ್ತಾನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಡಿ.ಕೆ.ತಿಮ್ಮಯ್ಯ, ಸಹಾಯಕ ಸರ್ಕಾರಿ ಅಭಿಯೋಜಕ ರಾದ ಕೆ.ಜಿ.ಅಶ್ವಿನಿ, ತಹಶೀಲ್ದಾರ್ ಆರ್.ಗೋವಿಂದ ರಾಜು ಇದ್ದರು. ಎ.ಡಿ.ಎಲ್.ಆರ್. ಶಂಷುದ್ಧೀನ್, ಹಿರಿಯ ವಕೀಲರಾದ ಡಿ.ಲಿಂಗಪ್ಪ, ಡಿ.ಎ.ಕೃಷ್ಣಕುಮಾರ್ ಅವರುಗಳು ಉಪನ್ಯಾಸ ನೀಡಿದರು.