ಭಾಗಮಂಡಲ, ನ. 26: ದ್ವಿಚಕ್ರ ವಾಹನದಲ್ಲಿ ಬಂದು ವ್ಯಾಪಾರ ಮಾಡುವ ನಾಟಕವಾಡಿ ಅಂಗಡಿಯಲ್ಲಿದ್ದ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು 28 ಗಂಟೆಗಳ ಅವಧಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾ. 24 ರಂದು ಮಧ್ಯಾಹ್ನ 3.15 ಗಂಟೆಗೆ ಭಾಗಮಂಡಲ ತಲಕಾವೇರಿ ರಸ್ತೆಯಲ್ಲಿರುವ ಶ್ರೀವಾಸ್ ಕೂರ್ಗ್ ಔಟ್ಲೆಟ್ಸ್, ಸ್ಪೈಸಸ್ ಅಂಗಡಿಗೆ ಇಬ್ಬರು ಅಪರಿಚಿತರು ನಂಬರ್ ಪ್ಲೇಟ್ ಇಲ್ಲದ ಸ್ಕೂಟಿಯಲ್ಲಿ ವೈನ್ ಖರೀದಿಸುವ ನೆಪದಲ್ಲಿ ಬಂದು ಒಳಗಡೆ ಪ್ರವೇಶಿಸಿ ಅಂಗಡಿಯಲ್ಲಿ ಇದ್ದ ಪೂಜಾ ಅವರ ಕುತ್ತಿಗೆಗೆ ಕೈಹಾಕಿ ರೂ. 30000 ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಅಲ್ಲಿದ್ದ ಮೊಬೈಲ್ ಫೋನ್ ಸಮೇತ ಪರಾರಿಯಾಗಿದ್ದು; ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಮೊ.ಸಂ. 49/2019 ಕಲಂ 392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ದಿನೇಶ್ಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತದ ಸಿಪಿಐ ದಿವಾಕರ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ ನೇಮಿಸಲಾಗಿತ್ತು. ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿ ಘಟನೆ ನಡೆದು 28 ಗಂಟೆಯ ಒಳಗಾಗಿ ಅಪರಿಚಿತ ಆರೋಪಿಗಳ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಮೂಲತ ಕೇರಳ ಇಡುಕ್ಕಿಯ ಆರೋಪಿಗಳಾದ ಸುಳ್ಯ ಗಾಂಧಿ ನಗರದಲ್ಲಿ ನೆಲೆಸಿರುವ ಕೆ.ಎಂ. ನವಾಜ್ (28) ಕಾಞಂಗಾಡುವಿನ, ಸುಳ್ಯದಲ್ಲಿ ನೆಲೆಸಿರುವ ಸಿ.ಇ. ಉಮ್ಮರ್ (30) ಅವರುಗಳನ್ನು ತಾ. 25 ರಂದು ರಾತ್ರಿ 7 ಗಂಟೆಗೆ ಸುಳ್ಯ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗಳು ಸುಲಿಗೆ ಮಾಡಿದ ಮಾಂಗಲ್ಯ ಸರ, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಇನ್ಟಾರ್ಕ್ ಸ್ಕೂಟಿಯನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಪತ್ತೆ ಕಾರ್ಯದಲ್ಲಿ ಭಾಗಮಂಡಲ ಠಾಣಾಧಿಕಾರಿ ಹೆಚ್.ಕೆ. ಮಹದೇವ, ಮುಖ್ಯಪೇದೆ ಇಬ್ರಾಹಿಂ, ನಾಗೇಶ್ ಮತ್ತು ನಂಜುಂಡ ಪಾಲ್ಗೊಂಡಿದ್ದರು.
ಪ್ರಕರಣದ ವಿವರ
ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ಮಾರ್ಗದ ಬದಿಯಲ್ಲಿರುವ; ಪಿ.ಡಿ. ರವಿನ್ ಮುತ್ತಣ್ಣ ಅವರಿಗೆ ಸೇರಿದ ಅಂಗಡಿಯಲ್ಲಿ; ವ್ಯಾಪಾರದ ಸೋಗಿನಲ್ಲಿ ಇಬ್ಬರು ಅಪರಿಚಿತರು ಬಂದಿದ್ದಾರೆ. ಅಂಗಡಿಯಲ್ಲಿದ್ದ ವಸ್ತುಗಳನ್ನು ಖರೀದಿಸುವಂತೆ ನಟಿಸುವದರೊಂದಿಗೆ; ಒಂಟಿಯಾಗಿದ್ದ ಪೂಜಾ ಚೇತನ್ ಕೊರಳಿನ ಸರವನ್ನು ಕಸಿದುಕೊಂಡಿದ್ದಾರೆ.
ಮರುಕ್ಷಣದಲ್ಲಿ ಆಕೆಯ ಮೊಬೈಲ್ ಸೇರಿದಂತೆ ಇತರ ವಸ್ತುಗಳೊಂದಿಗೆ ಕೆಂಪು ಬಣ್ಣದ ಸ್ಕೂಟರ್ನಲ್ಲಿ ಪರಾರಿ ಯಾಗಿದ್ದಾರೆ. ಈ ದುಷ್ಕøತ್ಯದಿಂದ ಕಂಗಾಲಾಗಿ ಪೂಜಾ ಅನತಿ ದೂರ ಕಾಲ್ನಡಿಗೆಯಲ್ಲಿ ಬಂದು ಇತರರಿಗೆ ವಿಷಯ ಮುಟ್ಟಿಸುವ ದರೊಂದಿಗೆ; ಭಾಗಮಂಡಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ದುಷÀ್ಕøತ್ಯ ಎಸಗಿರುವ ಆರೋಪಿಗಳಿಬ್ಬರು ಮೊದಲಿಗೆ ಬಂದು ಚಹಾಪುಡಿ ಇತ್ಯಾದಿ ಖರೀದಿಸಿದ್ದು; ಅಂಗಡಿಯಲ್ಲಿ ಪೂಜಾ ಒಬ್ಬೊಂಟಿಯಾಗಿ ಇರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಅಲ್ಲಿಂದ ಅನತಿ ದೂರ ತೆರಳಿ ಮತ್ತೆ ಹಿಂದಿರುಗಿ ಬಂದು ಇನ್ನಷ್ಟು ವಸ್ತುಗಳನ್ನು ಖರೀದಿಸುವಂತೆ ನಟಿಸುತ್ತಾ ಅಂಗಡಿಯೊಳಗೆ ನುಗ್ಗಿದ್ದಾರೆ.
ಮರುಕ್ಷಣ ಆಕೆಯ ಕೊರಳಿನ ಸರ ಹಾಗೂ ಮೊಬೈಲ್ ಕಸಿದುಕೊಂಡು ಸ್ಕೂಟರ್ನಲ್ಲಿ ಪರಾರಿಯಾಗಿದ್ದರು.
ವಿಷಯ ತಿಳಿದ ಕೂಡಲೇ ಎಚ್ಚೆತ್ತುಕೊಂಡ ಸಾರ್ವಜನಿಕರು ಚೇರಂಬಾಣೆಗೆ ಸುದ್ದಿ ರವಾನಿಸಿದ್ದಾರೆ. ಇತ್ತ ಪೊಲೀಸರು ಬಿರುಸಿನ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಸರಗಳ್ಳರಿಬ್ಬರು ಸಂಬಂಧಿಸಿದ ವಾಹನದಲ್ಲಿ ಅತ್ತ ಬಂದಿದ್ದು; ಕೂಡಲೇ ಸಾರ್ವಜನಿಕರು ಚೇರಂಬಾಣೆಯಲ್ಲಿ ಸ್ಕೂಟರ್ ಸವಾರರನ್ನು ಜೀಪಿನಲ್ಲಿ ಬೆನ್ನಟ್ಟಿದ್ದಾರೆ.
ಈ ಸಂದರ್ಭ ಮುಖ್ಯ ರಸ್ತೆ ಬಿಟ್ಟು ಚೇರಂಬಾಣೆಯಿಂದ ಕೊಳಗದಾಳು ರಸ್ತೆಯಲ್ಲಿ ತೆರಳಿರುವ ಆರೋಪಿಗಳು; ಒಂದೆಡೆ ಸ್ಕೂಟರ್ ಅನ್ನು ರಸ್ತೆ ಬದಿ ಬಿಟ್ಟು ಕಾಡಿನಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದರು.