ಸೋಮವಾರಪೇಟೆ, ನ. 25: ಸಮಚಿತ್ತದಿಂದ ಸುಖ-ದುಖಃಗಳನ್ನು ಅನುಭವಿಸುವವರು, ಸಹಜವಾಗಿ ಇರುವವರು ಹಾಗೂ ಮೌಲ್ಯ, ಸಿದ್ಧಾಂತ, ಆಧ್ಯಾತ್ಮಿಕತೆಯ ಆರಾಧಕರಾಗಿದ್ದರೆ ಮಾತ್ರ ಮಠದ ಪೀಠಾಧಿಪತಿಗಳಾಗಲು ಸಾಧ್ಯ ಎಂದು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್‍ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಿಸಿದರು.ಇಲಿನ ವಿರಕ್ತ ಮಠದ ಲಿಂಗೈಕ್ಯ ವಿಶ್ವೇಶ್ವರ ಸ್ವಾಮೀಜಿಯ ಪ್ರಥಮ ಪುಣ್ಯಾರಾಧನೆ ಹಾಗೂ ನೂತನ ಶ್ರೀಗಳ ನೇಮಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ಸ್ವಾಮೀಜಿಗಳ ಜೀವನ ಎಂದರೆ ಬೀದಿ ದೀಪದ ಬೆಳಕಿನಂತೆ. ಅದು ಪ್ರಕಾಶಮಾನವಾಗಿ ಎಲ್ಲರಿಗೂ ಬೆಳಕನ್ನು ನೀಡುವಂತಹ ಕ್ರಿಯೆ. ಈ ಹುದ್ದೆಯನ್ನು ಅಲಂಕರಿಸಿದವರು ಸತ್ಯದ ಶೋಧಕರಾಗಿರಬೇಕು. ಬದುಕಿನಲ್ಲಿ ಸದ್ಗುಣಗಳನ್ನು ಲೇಪಿಸಿ ಕೊಳ್ಳುವ ಮೂಲಕ ಸಮಾಜದಲ್ಲಿನ ಅಂಧಕಾರ ಹಾಗೂ ಮೂಢನಂಬಿಕೆ ಗಳನ್ನು ಹೋಗ ಲಾಡಿಸಲು ಪ್ರಯತ್ನಿಸಬೇಕೆಂದರು.

ಇಂದು ಸಮಾಜದಲ್ಲಿ ಮೊಬೈಲ್ ಮತ್ತು ಮೋಹದ ದೃಶ್ಯಮಾಧ್ಯಮ ಗಳಿಂದ ಜನರ ಬದುಕು ಬದಲಾಗುತ್ತಿರುವದು ದುರಂತ. ನಾವು ಸಂಸ್ಕಾರಯುತ ಜೀವನವನ್ನು ನಡೆಸಿದರೆ ಮಾತ್ರ ಮೋಕ್ಷವನ್ನು ಪಡೆಯಲು ಸಾಧ್ಯ ಎಂದ ಶ್ರೀಗಳು, ಮುಂದಿನ ದಿನಗಳಲ್ಲಿ ವಿರಕ್ತ ಮಠದ ಆವರಣದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣ ಹಾಗೂ ಶಿವಾನುಭವ

(ಮೊದಲ ಪುಟದಿಂದ) ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವದು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಸಂತನ ಬದುಕು ಸ್ವಂತಕ್ಕಲ್ಲ, ಅದು ಸಮಾಜಕ್ಕಾಗಿ. ಪೀಠದ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ. ಕೆಂಡದ ಮೇಲೆ ಮಲಗಿದಂತಹ ಅನುಭವವನ್ನು ತಿಳಿಸಿಕೊಡುತ್ತದೆ. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಸಮಾಜದಲ್ಲಿ ಉತ್ತಮರೆನಿಸಿಕೊಳ್ಳಲು ಸಾಧ್ಯ ಎಂದರು.

ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಶರಣರ ಜೀವನ, ವಚನಗಳು ನಮ್ಮ ಬದುಕಿಗೆ ಮೌಲ್ಯಯುತ ಸಂದೇಶವನ್ನು ನೀಡುತ್ತದೆ. ನಿರ್ದಿಷ್ಟ ಗುರಿಯೊಂದಿಗೆ ಶರಣರ ಆದರ್ಶಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ಕಾಣಬೇಕೆಂದರು.

ಇದೇ ಸಂದರ್ಭ ವಿರಕ್ತ ಮಠದ ನೂತನ ಶ್ರೀಗಳಾಗಿ ರಾವಂದೂರು ಮಠದ ಮೋಕ್ಷಪತಿ ಸ್ವಾಮೀಜಿ ಅವರು ಪೀಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ವೇದಿಕೆಯಲ್ಲಿ ಹೆಬ್ಬಾಳು ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ವೀರಶೈವ ಸಮಾಜದ ಯಜಮಾನರಾದ ಕೆ.ಎನ್. ಶಿವಕುಮಾರ್, ಶೆಟ್ಟರಾದ ಕೆ.ಎನ್. ತೇಜಸ್ವಿ, ಕಾರ್ಯದರ್ಶಿ ಜೆ.ಸಿ. ಶೇಖರ್, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಅಕ್ಕನಬಳಗದ ಅಧ್ಯಕ್ಷೆ ಜಲಜಾ ಶೇಖರ್ ಉಪಸ್ಥಿತರಿದ್ದರು. ದಾವಣ ಗೆರೆಯ ಬಸವ ಕಲಾ ತಂಡದಿಂದ ಭಜನೆ ಕಾರ್ಯಕ್ರಮ ನಡೆಯಿತು.