ಬೆಂಗಳೂರು, ನ. 26: ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಕೊಡಗಿನ ಏಳು ಕಡೆಯ ರಸ್ತೆಗಳ ವಿಸ್ತರಣೆ ವಿರುದ್ಧ ಸಲ್ಲಿಸಲ್ಪಟ್ಟಿದ್ದ ರಿಟ್ ಅರ್ಜಿ ಕುರಿತಾಗಿ ಆದೇಶವೊಂದನ್ನು ಹೊರಡಿಸಿದ ನ್ಯಾಯಾಲಯ ಈ ಪ್ರಕರಣಕ್ಕೆ ಮುಕ್ತಾಯ ಹಾಡಿದೆ.ಕೊಡಗು ವನ್ಯಜೀವಿ ಸಂಘದ ಪ್ರಮುಖ (ಮಾಜಿ ಅಧ್ಯಕ್ಷ) ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ಸುಪ್ರೀಂ ಕೋರ್ಟ್ ವಕೀಲ ಬಿ.ಆರ್. ದೀಪಕ್ ಅವರ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯೊಂದನ್ನು ಸಲ್ಲಿಸಿದ್ದರು.ಕೊಡಗಿನ ಏಳು ಕಡೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಅಭಿವೃದ್ಧಿಗೊಳಿಸುವದರ ವಿರುದ್ಧ ವಾದ ಮಾಡಲಾಗಿತ್ತು. ವಾದ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಇಂದು ಆದೇಶವೊಂದನ್ನು ಹೊರಡಿಸುವ ಮೂಲಕ ಪ್ರಕರಣವನ್ನು ಮುಕ್ತಾಯ ಗೊಳಿಸಿದ್ದಾರೆ.ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಓಖಾ ಹಾಗೂ ಪ್ರದೀಪ್ ಸಿಂಗ್ ಇವರುಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿರುವ ನಿರ್ದೇಶನ ಹೀಗಿದೆ.ಕೊಡಗಿನ ಏಳು ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅಗಲೀಕರಣಗೊಳಿಸುವ ಕಾರ್ಯಕ್ಕೆ ಮುನ್ನ ವನ್ಯಜೀವಿ ಸಂಘಕ್ಕೆ ವಿವರ ಮಾಹಿತಿ ನೀಡಬೇಕು. ಅಲ್ಲದೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅಗತ್ಯವಾದ ನಿರಾಕ್ಷೇಪಣಾ ಪತ್ರಗಳನ್ನು ಪಡೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ ಈಗಾಗಲೇ ವೀರಾಜಪೇಟೆ ರಸ್ತೆ ವಿಸ್ತರಣೆಗಾಗಿ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದು, ಈ ಕೆಲಸವನ್ನು ಕೂಡ ಪೂರ್ವಾ ನುಮತಿ ಇಲ್ಲದೆ ಕೆಲಸ ಆರಂಭಿಸ ಬಾರದೆಂದು ನ್ಯಾಯಾಲಯವು ನಿರ್ದೇಶಿಸಿದೆ.